ಸಾರಾಂಶ
ಶ್ರಾವಣ ಮಾಸದ ಪುರಾಣ ಪ್ರವಚನ ಮಂಗಲ ಸಮಾರಂಭಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಜೀವನಾಧಾರಕ್ಕೆ ನೀರು ಅನ್ನ ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಉತ್ತಮ ಚಿಂತನೆಗಳು ಬದುಕಿನ ಶ್ರೇಯುಸ್ಸಿಗೆ ಮೂಲ. ಸತ್ಯ ಮತ್ತು ಸಂಸ್ಕೃತಿ ಉಳಿದು ಬೆಳೆದು ಬರಬೇಕಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು. ರಂಭಾಪುರಿ ಪೀಠದಲ್ಲಿ ಶನಿವಾರ ನಡೆದ ಶ್ರಾವಣ ಮಾಸದ ಪುರಾಣ ಪ್ರವಚನ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬದುಕು ಸುಖ ದುಃಖ, ನೋವು ನಲಿವು, ಮಾನ-ಅಪಮಾನ, ಜಯ ಅಪಜಯ ಮೊದಲಾದ ದ್ವಂದ್ವ ಗಳಿಂದ ಕೂಡಿದೆ. ಈ ಸಂಗತಿ ಯಾರಿಗೆ ಗೊತ್ತಿದೆಯೋ ಅವರು ಜೀವನದಲ್ಲಿ ಏನೆಲ್ಲ ಕಷ್ಟ ಬಂದರೂ ಅವುಗಳಿಗೆ ಎದೆಗುಂದ ಬಾರದು. ಸುಖದ ಬದುಕಿಗೆ ಪ್ರಯತ್ನ ಮತ್ತು ಸಾಧನೆ ಬೇಕು. ಬದುಕು ವಿಕಾಸಗೊಳ್ಳಲು ಆಧ್ಯಾತ್ಮದ ಅರಿವು ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ.ಬಿಸಿಲಿನಿಂದ ಬಳಲಿ ಬಂದ ಜನರಿಗೆ ಮರ ನೆರಳು ನೀಡುತ್ತದೆ. ಕಲ್ಲು ಹೊಡಿಸಿಕೊಂಡ ರುಚಿಯಾದ ಹಣ್ಣು ಕೊಡುತ್ತದೆ. ನಿಂತ ನೆಲ ಮತ್ತು ನೆರಳು ಕೊಟ್ಟ ಮರವನ್ನೇ ನಾವಿಂದು ಕತ್ತರಿಸುತ್ತಿದ್ದೇವೆ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡಿ ಸತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಸಂಕಲ್ಪ ಎಲ್ಲರದೂ ಆಗಬೇಕು ಎಂದರು.ಶ್ರಾವಣ ಮಾಸ ಒಂದು ತಿಂಗಳ ಕಾಲ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿ ಮಂಗಲಗೊಳಿಸುತ್ತಿರುವ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಸುಂದರ ಉಡುಪು ನಮ್ಮ ವ್ಯಕ್ತಿತ್ವ ಮೆರೆಸಬಹುದು. ಸುಂದರವಾದ ಗುಣ ನಮ್ಮ ಬದುಕನ್ನೇ ಬದಲಾಯಿಸುತ್ತದೆ. ಸುಖ ದುಃಖ ಶಾಶ್ವತವಲ್ಲ. ಅವೆರಡನ್ನು ಸಮಾನವಾಗಿ ಸ್ವೀಕರಿಸಿ ಬಾಳಿದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ವಿಚಾರ ಧಾರೆ ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ ಎಂದರು.
ಯಡಿಯೂರು ರೇಣುಕ ಶಿವಾಚಾರ್ಯರು, ದೊಡ್ಡಗುಣಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಹುಡುಗಿಯ ಸೋಮೇಶ್ವರ ಶಿವಾಚಾರ್ಯರು, ಉಟಗಿ ಶಿವಪ್ರಸಾದ ದೇವರು ನುಡಿ ನಮನ ಸಲ್ಲಿಸಿದರು. ಪುರಾಣ ಪ್ರವಚನ ಮಾಡಿದ ನೆಗಳೂರು ಗುರುಶಾಂತೇಶ್ವರ ಶ್ರೀಗಳಿಗೆ ರೇಶ್ಮೆ ಶಾಲು. ಮಡಿ, ಹೂ ಹಾರ, ಫಲ ತಾಂಬೂಲ ಗಳನ್ನು ನೀಡಿ ಶ್ರೀ ರಂಭಾಪುರಿ ಜಗದ್ಗುರು ಶುಭ ಹಾರೈಸಿದರು. ಸಮಾರಂಭದಲ್ಲಿ ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ಎಸ್.ಜೆ.ಆರ್. ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರಭುದೇವ ಕಲ್ಮಠ, ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಶಿವಮೊಗ್ಗದ ರಾಜು, ಗುರುಕುಲದ ಕುಲಪತಿ ಸಿದ್ಧಲಿಂಗ ಶಾಸ್ತ್ರಿ, ಶಿಕ್ಷಕ ವೀರೇಶ ಕುಲಕರ್ಣಿ ಮತ್ತಿತರರು ಹಾಜರಿದ್ದರು. ಬೆಳಿಗ್ಗೆ ರಂಭಾಪುರಿ ಜಗದ್ಗುರು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ನೂರೆಂಟು ಕಲಶೋಧಕದಿಂದ ಅಭಿಷೇಕ ನೆರವೇರಿಸಿ ನಂತರ ಜನ ಕಲ್ಯಾಣಕ್ಕಾಗಿ ಇಷ್ಟಲಿಂಗ ಮಹಾಪೂಜಾ ಮಾಡಿ ಬಂದ ಭಕ್ತರೆಲ್ಲರಿಗೂ ಶುಭ ಹಾರೈಸಿದರು.೨೩ಬಿಹೆಚ್‌ಆರ್ ೭:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಒಂದು ತಿಂಗಳ ಕಾಲ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ರಂಭಾಪುರಿ ಜಗದ್ಗುರು ಆಶೀರ್ವದಿಸಿದರು.