ವಿಶ್ವವಿದ್ಯಾಲಯಗಳು ನಾವಿನ್ಯತೆ, ಉದ್ಯಮಶೀಲತೆಯ ಶಿಕ್ಷಣ ಕೊಡಲಿ-ರಾಜ್ಯಪಾಲ
KannadaprabhaNewsNetwork | Published : Oct 31 2023, 01:16 AM IST
ವಿಶ್ವವಿದ್ಯಾಲಯಗಳು ನಾವಿನ್ಯತೆ, ಉದ್ಯಮಶೀಲತೆಯ ಶಿಕ್ಷಣ ಕೊಡಲಿ-ರಾಜ್ಯಪಾಲ
ಸಾರಾಂಶ
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ, ಆತ್ಮನಿರ್ಭರ ಭಾರತ ನಿರ್ಮಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ. ಯುವಕರು ಈ ದೇಶದ ಪ್ರಗತಿಯಲ್ಲಿ ಪಾಲ್ಗೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು ರಾಜ್ಯಪಾಲರು.
ಕನ್ನಡಪ್ರಭ ವಾರ್ತೆ ಧಾರವಾಡ ಪ್ರಸ್ತುತ ಜಗತ್ತಿನಲ್ಲಿ ಪ್ರಾಜೆಕ್ಟ್ ಆಧಾರಿತ ಕಲಿಕೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡಲು ನಾವೀನ್ಯತೆ ಮತ್ತು ಉದ್ಯಮಶೀಲತೆ ಕಡೆಗೆ ಕೆಲಸ ಮಾಡಬೇಕಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು. ಕರ್ನಾಟಕ ವಿವಿಯ 73ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ, ಆತ್ಮನಿರ್ಭರ ಭಾರತ ನಿರ್ಮಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ. ಯುವಕರು ಈ ದೇಶದ ಪ್ರಗತಿಯಲ್ಲಿ ಪಾಲ್ಗೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಜ್ಞಾನ, ಸಂಸ್ಕೃತಿ, ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಅನಾದಿಕಾಲದಿಂದಲೂ ಈ ದೇಶದಲ್ಲಿ ಜ್ಞಾನದ ಪ್ರಸಾರ ಮಾಡಲಾಗುತ್ತಿದೆ, ಸಿಂಧೂ ನಾಗರಿಕತೆ, ನಳಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳು ಇದಕ್ಕೆ ಉದಾಹರಣೆಯಾಗಿವೆ ಎಂದರು. ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ, ವಸುಧೈವ ಕುಟುಂಬಕಂದ ತತ್ವಶಾಸ್ತ್ರ ಮತ್ತು ಧ್ಯಾನವನ್ನು ಕೇಂದ್ರೀಕರಿಸುತ್ತದೆ. ಇದು ವಿಶ್ವ ಸಹೋದರತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ ಎಂದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ದೇಶದ ಹಳೆಯ ವಿಶ್ವವಿದ್ಯಾಲಯಗಳಲ್ಲೊಂದಾದ ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಣ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಾಕಷ್ಟು ರೀತಿಯ ಕೊಡುಗೆಗಳನ್ನು ನೀಡಿ, ರಾಜ್ಯದ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದೆ. ವಿವಿಗೆ ಅಗತ್ಯ ಆರ್ಥಿಕ ಅನುದಾನವನ್ನು ಒದಗಿಸಲಾಗುವುದು. ಆಧುನಿಕ ಜ್ಞಾನ-ವಿಜ್ಞಾನದಿಂದ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಬೆಳವಣಿಗೆಯಾಗುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯ ಹಲವಾರು ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಯಶಸ್ಸು ಕಾಣಲಿದೆ ಎಂದು ಸಚಿವರು ತಿಳಿಸಿದರು. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಇದ್ದರು. ಇದೇ ಸಂದರ್ಭದಲ್ಲಿ ಅರವಿಂದ ಜತ್ತಿ, ಅರ್ಚನಾ ಸುರಾನಾ ಮತ್ತು ರವಿಶಂಕರ್ ಭೂಪಳಾಪುರ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.