ಸಾರಾಂಶ
ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾದೂರು ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಗದ್ದಿಕೇರಿ ದೊಡ್ಡಬಸಪ್ಪ ಮಾತನಾಡಿ, ಮೌಲ್ಯಾದರ್ಶಗಳನ್ನು ಅಳವಡಿಸಿಕೊಂಡು ಮೌಢ್ಯತೆ, ಅಸಮಾನತೆ ತೊಲಗಿಸಬೇಕು. ಮಹಾತ್ಮ ಗಾಂಧೀಜಿ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಅವಿರತವಾಗಿ ಶ್ರಮಿಸಿದ್ದಾರೆ. ದೇಶಕ್ಕೆ ಕಳಂಕವಾದ ಅಸ್ಪೃಶ್ಯತೆಯನ್ನು ಕಿತ್ತೆಸೆಯಬೇಕಿದೆ. ಸಮಾಜದಲ್ಲಿ ಈಗಲೂ ಮಡಿ-ಮೈಲಿಗೆ ಪದ್ಧತಿಗಳು ವ್ಯಾಪಕವಾಗಿ ಚಾಲ್ತಿಯಲ್ಲಿರುವುದು ಬೇಸರ ತರಿಸಿದೆ. ಜಾತಿ ಆಧಾರಿತ ತಾರತಮ್ಯಗಳನ್ನು ಪ್ರಶ್ನಿಸಲು, ಸಾಮಾಜಿಕ ಸಾಮರಸ್ಯ ಉತ್ತೇಜಿಸಲು ವಿವಿಧ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಸಾಮಾಜಿಕ ಜಾಢ್ಯಗಳನ್ನು ಕಿತ್ತೆಸೆಯಬೇಕಿದೆ ಎಂದರು.ವಕೀಲ, ಉಪನ್ಯಾಸಕ ಸತ್ಯನಾರಾಯಣ ಮಾತನಾಡಿ, ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಿಕ್ಷಣ, ಸಂಘಟನೆ, ಹೋರಾಟದಿಂದ ಸಮಾಜದ ಬದಲಾವಣೆ ಸಾಧ್ಯ ಎಂದರು.
ಕೂಡ್ಲಿಗಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ ಚಲವಾದಿ ಮಾತನಾಡಿ, ಅಸ್ಪೃಶ್ಯತೆ ನಿವಾರಣೆ ಬರಿ ಕಾನೂನು ಜಾರಿಯಿಂದ ಮಾತ್ರ ಸಾಧ್ಯವಿಲ್ಲ. ಇದರ ನಿವಾರಣೆಗೆ ಜನರ ಮನಸ್ಥಿತಿ ಬದಲಾಗಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಬೇರುಬಿಟ್ಟಿರುವ ಅಸ್ಪೃಶ್ಯತೆಯನ್ನು ಕಿತ್ತೆಸೆಯಬೇಕಿದೆ. ಜಾತಿ ಶ್ರೇಣಿ ವ್ಯವಸ್ಥೆ ದೇಶಕ್ಕೆ ಮಾರಕವಾಗಿದೆ ಎಂದರು. ಜಿಲ್ಲಾ ಸಂಚಾಲಕ ಮಹೇಶ್ ಮಾದೂರು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಪಂಪಾನಾಯ್ಕ, ಗ್ರಾಪಂ ಸದಸ್ಯರಾದ ಪಾಂಡುನಾಯ್ಕ, ಗೋಪಿನಾಯ್ಕ, ಭವಿಷ್ಯನಾಯ್ಕ, ಸದಸ್ಯ ಮೈಲಪ್ಪ, ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಲಿಂಗಪುರ, ಪಿಡಿಒ ಶಿವರಾಜ, ಗೀತಾ, ಆಶಾ, ಜ್ಯೋತಿ, ವೀರೇಶ್, ರಾಜು ಇತರರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಶೋಭಾ, ಚಂದ್ರನಾಯ್ಕ, ನಾಗರಾಜ, ಸೋಮಣ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.