ವಿವಿಧ ಧರ್ಮಗಳ ಧರ್ಮಗುರುಗಳು ಮಾತನಾಡಿ, ಧರ್ಮಗಳ ಆಶಯದಲ್ಲಿ ಮಾನವೀಯತೆ, ಶಾಂತಿ, ಪ್ರೀತಿ, ಕರುಣೆ ಮತ್ತು ಸಹಬಾಳ್ವೆಗೆ ಮಹತ್ವವಿದೆ ಎಂಬ ಸಂದೇಶ ನೀಡಿ ಗಾಂಧೀಜಿ, ಶಾಸ್ತ್ರೀಯವರನ್ನು ಸ್ಮರಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ್ ಕರೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯಾಂಗ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 122ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಯಂತಿ ಆಚರಣೆ ಕೇವಲ ಮಹನೀಯರ ಭಾವಚಿತ್ರಕ್ಕೆ ಹೂವು, ಹಾರ ಅರ್ಪಿಸುವುದಕ್ಕೆ ಸೀಮಿತವಾಗದೆ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.ಪ್ರತಿಯೊಬ್ಬರೂ ತಮ್ಮ ಕರ್ತವ್ಯ, ಜವಾಬ್ದಾರಿ ಹಾಗೂ ನಡೆ- ನುಡಿಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜದಲ್ಲಿ ಪ್ರಾಮಾಣಿಕತೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಗಾಂಧೀಜಿಯವರ ಆಶಯಗಳನ್ನು ಸಾಕಾರಗೊಳಿಸಬಹುದು ಎಂದು ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಸರಳತೆ, ಪ್ರಾಮಾಣಿಕತೆ ಮತ್ತು ನೈತಿಕ ಹೊಣೆಗಾರಿಕೆಗೆ ಮಾದರಿಯಾಗಿದ್ದರು. ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಮೂಲಕ ದೇಶದ ಸೈನಿಕರು ಹಾಗೂ ರೈತರ ಮಹತ್ವವನ್ನು ಎತ್ತಿಹಿಡಿದ ಮಹಾನ್ ನಾಯಕರು ಎಂದು ಸ್ಮರಿಸಿದರು.ಡೀಸಿ ಡಾ.ಕುಮಾರ್ ಮಾತನಾಡಿ, ಮಹನೀಯರ ಜಯಂತಿಗಳನ್ನು ಆಚರಿಸುವ ಉದ್ದೇಶ ಕೇವಲ ಒಂದು ದಿನ ಅವರನ್ನು ಸ್ಮರಿಸುವುದಲ್ಲ. ಅವರ ಆದರ್ಶಗಳು ಮತ್ತು ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಮಹಾತ್ಮ ಗಾಂಧೀಜಿಯವರು ಸತ್ಯ, ಶಾಂತಿ ಮತ್ತು ಅಹಿಂಸೆಯ ಮೂಲಕ ಇಡೀ ವಿಶ್ವಕ್ಕೆ ಹೊಸ ದಾರಿ ತೋರಿಸಿದ ಮಹಾನ್ ಚೇತನ. ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಸರಳತೆ, ಪ್ರಾಮಾಣಿಕತೆ ಹಾಗೂ ದೇಶದ ಬಗ್ಗೆ ಅವರ ಬದ್ಧತೆಯೂ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು.
ವಿವಿಧ ಧರ್ಮಗಳ ಧರ್ಮಗುರುಗಳು ಮಾತನಾಡಿ, ಧರ್ಮಗಳ ಆಶಯದಲ್ಲಿ ಮಾನವೀಯತೆ, ಶಾಂತಿ, ಪ್ರೀತಿ, ಕರುಣೆ ಮತ್ತು ಸಹಬಾಳ್ವೆಗೆ ಮಹತ್ವವಿದೆ ಎಂಬ ಸಂದೇಶ ನೀಡಿ ಗಾಂಧೀಜಿ, ಶಾಸ್ತ್ರೀಯವರನ್ನು ಸ್ಮರಿಸಿದರು.ಇದೇ ವೇಳೆ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಜಾತಿ, ಧರ್ಮ, ಪ್ರದೇಶ, ಮತ ಹಾಗೂ ಭಾಷೆಯ ಬೇಧಭಾವವಿಲ್ಲದೆ ದೇಶದ ಎಲ್ಲ ಜನರ ನಡುವೆ ಭಾವೈಕ್ಯತೆ ಮತ್ತು ಸೌಹಾರ್ದತೆ ಕಾಪಾಡಲು ಶ್ರಮಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು. ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಎದುರಾಗುವ ಯಾವುದೇ ಬೇಧಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ, ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುವುದಾಗಿ ಪ್ರತಿಜ್ಞೆ ಮಾಡಲಾಯಿತು.
ಹಿರಿಯ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಪಿ ಡಾ.ಶೋಭಾರಾಣಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಜಿಲ್ಲಾ ಯುವ ಅಧಿಕಾರಿ ಶೃತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.