ನಾವೆಲ್ಲ ಚುನಾವಣಾ ಹಬ್ಬ ಆಚರಿಸೋಣ: ಚನ್ನಬಸಪ್ಪ

| Published : Apr 20 2024, 01:00 AM IST

ಸಾರಾಂಶ

ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಶುಕ್ರವಾರ ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾವೆಲ್ಲರೂ ಮತದಾನ ಮಾಡುವ ಮೂಲಕ ಈ ಹಬ್ಬವನ್ನು ಆಚರಿಬೇಕಿದೆ, ಈ ಚುನಾವಣೆಯಲ್ಲಿ ಮತದಾನ ಮಾಡುವುದೇ ಒಂದು ಶ್ರೇಷ್ಠ ಹಬ್ಬ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಅಲ್ಲಮ ಪ್ರಭು ಮೈದಾನದಲ್ಲಿ ಶುಕ್ರವಾರ ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮತದಾನ ಮಾಡುವುದು ನಮ್ಮ ಹಕ್ಕು. ಭಾರತೀಯ ನಮ್ಮ ಸಂವಿಧಾನವು ಯಾವುದೇ ರೀತಿಯ ತಾರತಮ್ಯ ಮಾಡದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮತದಾನ ಮಾಡೋಣ. ಮತದಾನದ ಮೂಲಕ ದೇಶವನ್ನು ಶ್ರೀಮಂತಗೊಳಿಸೋಣ ಎಂದು ಹೇಳಿದರು.

ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಮಾಡೋಣ. ಮತದಾನ ನಮ್ಮ ಹಕ್ಕು ಮತ್ತು ಜವಾಬ್ದಾರಿ ಎರಡೂ ಎಂದು ಭಾವಿಸಿ ಮತ ಹಾಕೋಣ. ಗ್ರಾಮಿಣ ಭಾಗದಲ್ಲಿ ಶೇ. 80ರಷ್ಟು ಮತದಾನ ಆಗುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಈ ಭಾರಿ ನಗರ ಪ್ರದೇಶದಲ್ಲಿ ಶೇ. 100 ರಷ್ಟು ಮತದಾನ ಮಾಡೋಣ ಎಂದು ಕರೆ ನೀಡಿದ ಅವರು ಸಾರ್ವಜನಿಕರಿಗೆ ಮತದಾನ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂಧರ್ಭದಲ್ಲಿ ಜಾಗೃತ ಮತದಾರರ ವೇದಿಕೆಯ ಕೆ ಸಿ ಬಸವರಾಜು, ಪಿಎಸ್‍ಐ ವಿನಯ್ ಎಂ, ಸಾಹಿತಿ ಸುಂದರ್ ರಾಜ್ , ಪರಿಸರತಜ್ಞ ಶೇಖರ್ ಗೌಳೇರ್ ಇತರರು ಉಪಸ್ಥಿತರಿದ್ದರು.

‘ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮಕ್ಕೆ ಚಾಲನೆಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ವತಿಯಿಂದ ನಗರದ ಸೈನ್ಸ್ ಮೈದಾನದ ಮತಗಟ್ಟೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮವನ್ನು ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಉದ್ಘಾಟಿಸಿದರು.ಈ ವೇಳೆ ಅವರು ಮಾತನಾಡಿ, ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಮತದಾರರಿಗೆ ಅನುಕೂಲಕ್ಕಾಗಿ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಎಲ್ಲಾ ಮತದಾರರು ಸದುಪಯೋಗ ಪಡೆಸಿಕೊಂಡು ಮತದಾನದ ಹಬ್ಬದಲ್ಲಿ ಎಲ್ಲೂರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು, ಸ್ವೀಪ್ ತರಬೇತುದಾರ ನವೀದ್ ಪರ್ವೇಜ್ ಹಾಜರಿದ್ದರು.ವೋಟ್‌ ಹಾಕಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ: ಸಮನ್ವಯ ಕಾಶಿ

ಹೊಳೆಹೊನ್ನೂರು: ಭಾರತ ದೇಶದ ಪ್ರಜೆಗಳಾದ ನಾವು ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸವ ಅವಶ್ಯಕತೆ ಇದೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಅಭಿಯಾನ ವ್ಯವಸ್ಥಾಪಕ ಸಮನ್ವಯ ಕಾಶಿ ಹೇಳಿದರು.

ಸಮೀಪದ ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಕುವೆಂಪು ವಿವಿ ಮಟ್ಟದ ರಾ.ಸೇ.ಯೋ.ಶಿಬಿರದಲ್ಲಿ ಪಟ್ಟಣ ಪಂಚಾಯತ್ ಹೊಳೆಹೊನ್ನೂರಿನ ಸಹಯೋಗದಲ್ಲಿ ನಡೆದ ಕಡ್ಡಾಯ ಮತದಾನದ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 200 ವರ್ಷಗಳ ಕಾಲ ನಮ್ಮನ್ನು ಪರಕೀಯರು ಆಳಿದ್ದಾರೆ. ಆದರೆ ಈಗ ನಾವು ಸ್ವತಂತ್ರರಾಗಿ ನಮ್ಮನ್ನು ನಾವೇ ಆಳುವ ಪ್ರಜಾಪ್ರಭುತ್ವವನ್ನು ರೂಪಿಸಿಕೊಂಡಿದ್ದೇವೆ. ಈ ಹೊತ್ತಿನಲ್ಲಿ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.ಹೊಳೆಹೊನ್ನೂರು ಪಟ್ಟಣ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮಂಜುನಾಥ್ ಮಾತನಾಡಿ, ಮತದಾನ ನಮ್ಮ ಹಕ್ಕು, ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವುದರ ಅಗತ್ಯವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಮದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೆ.ಛಾಯಾಶ್ರೀ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಕೆ.ಆರ್.ಪ್ರತಿಭಾ ಮಾತನಾಡಿ, ನಾವು ಎಚ್ಚರದಿಂದ‌ ಇದ್ದಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥವಿರುತ್ತದೆ. ಎಚ್ಚರದೊಂದಿಗೆ ಮತ ಚಲಾಯಿಸಬೇಕು ಎಂದರು.ಪಟ್ಟಣ ಪಂಚಾಯತ್ ನ ಅಧಿಕಾರಿ ಬಸವರಾಜ್, ಆಶಾಲತಾ, ಧನಲಕ್ಷ್ಮಿ, ಅಣ್ಣಪ್ಪ ಹಾಗೂ ರಾ.ಸೇ.ಯೋ ಅಧಿಕಾರಿ ಡಾ.ರಾಜು ನಾಯ್ಕ್.ಎಸ್, ರುದ್ರಮುನಿ.ಎಚ್, ಐಕ್ಯುಎಸಿ ಸಂಚಾಲಕಿ ಡಾ.ಭಾರತಿ ದೇವಿ.ಪಿ ಉಪಸ್ಥಿತರಿದ್ದರು. ಕು.ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್.ಎಸ್.ಸ್ವಾಗತಿಸಿದರು. ಕು.ಸಹನಾ ವಂದಿಸಿದರು.

ಪ್ರಜಾಪ್ರಭುತ್ವ ಹಬ್ಬ ಯಶಸ್ವಿಯಾಗಲಿ: ರಮೇಶ್‌ ರಾವ್ ಕರೆ ಸೊರಬ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಾಗೂ ಕೇಂದ್ರ ಮಹಿಳಾ ಮೀಸಲು ಪಡೆ ಪೊಲೀಸರು ಪಟ್ಟಣದ ವಿವಿಧ ಬೀದಿಗಳಲ್ಲಿ ಶುಕ್ರವಾರ ಪಥಸಂಚಲನ ನಡೆಸಿದರು.ಪಟ್ಟಣದ ಪುರಸಭೆ ಮುಂಭಾಗದಿಂದ ಮುಖ್ಯರಸ್ತೆ, ಕಾನಕೇರಿ, ಚಿಕ್ಕಪೇಟೆ, ಚಾಮರಾಜಪೇಟೆ ಸೇರಿದಂತೆ ಪ್ರಮುಖ ಆಯಕಟ್ಟಿನ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸುವ ಜೊತೆಗೆ ಚುನಾವಣೆಯಲ್ಲಿ ಶಾಂತಿ ಕಾಪಾಡಬೇಕು ಹಾಗೂ ಶಾಂತಿ ಕದಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಯಿತು.

ಚುನಾವಣೆ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿ ಕಾರ್ಯೋನ್ಮುಖರಾಗಬೇಕು. ಜೊತೆಗೆ ಜನತೆಯೊಂದಿಗೆ ಪೊಲೀಸ್ ಇಲಾಖೆ ಇದ್ದು, ನಿರ್ಭಿತಿಯಿಂದ ಮತ ಚಲಾವಣೆ ಮಾಡಬೇಕು ಎಂಬ ಸಂದೇಶ ಸಾರುವುದು ಪಥ ಸಂಚಲನದ ಉದ್ದೇಶವಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅಂತಹ ಸ್ಥಳಗಳಲ್ಲಿ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜನರು ಸಹ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಾ ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯ ಯಶಸ್ವಿಗೆ ಸಹಕರಿಸಬೇಕು ಎಂದು ಪಥ ಸಂಚಲನದ ನೇತೃತ್ವ ವಹಿಸಿದ್ದ ಪೊಲೀಸ್ ವೃತ್ತ ನಿರೀಕ್ಷಕ ರಮೇಶ್‌ ರಾವ್ ತಿಳಿಸಿದರು.

ಪಥಸಂಚಲನದಲ್ಲಿ ಪಿಎಸ್‌ಐ ನಾಗರಾಜ್, ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಸಿ.ಜ್ಯೋತಿ ವೆಲ್ಲೂರು, ಸಬ್‌ ಇನ್ಸ್‌ಪೆಕ್ಟರ್ ಎನ್.ಪಿ.ಕಮಲಾವತಿ ಶಿರಸಿ, ಸೊರಬ ಪೊಲೀಸ್ ಠಾಣೆಯ ಹೆಡ್‌ಕಾನ್ಸ್ಟೇಬಲ್ ನಾಗೇಶ್, ರಾಘವೇಂದ್ರ, ಲೋಕೇಶ್, ವಿನಯ್, ಅರುಣ್, ಹೇಮಾ, ನಾಗರಾಜ್ ಸೇರಿದಂತೆ ಸಿಆರ್‌ಪಿಎಫ್ ಪಡೆ ಪಥ ಸಂಚಲನದಲ್ಲಿ ಇತ್ತು.