ಸಾರಾಂಶ
ಹೊಸಪೇಟೆ: ದೇಶದಲ್ಲಿ ತಲೆದೋರಿದ ಆಹಾರ ಸಮಸ್ಯೆ ಹೋಗಲಾಡಿಸಿ, ಹಸಿರುಕ್ರಾಂತಿಗೆ ಕಾರಣರಾದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು. ಡಾ. ಬಾಬು ಜಗಜೀವನ್ ರಾಮ್ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿದವರು. ಹಸಿರುಕ್ರಾಂತಿಯ ಹರಿಕಾರ. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೃಷಿ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು. ಅವರ ಸೇವೆ ಸ್ಮರಣೀಯವಾದುದು. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ದೇಶಾದ್ಯಂತ ''ಬಾಬೂಜಿ'' ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ. ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ ವಿರುದ್ಧ ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರು ಕೂಡ ಒಬ್ಬರು ಎಂದರು.
ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಮುಖಂಡರಾದ ಕೆ.ಪಿ. ಉಮಾಪತಿ, ರಾಮಚಂದ್ರಬಾಬು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಚ್.ವಿ. ಮಂಜುನಾಥ ಮತ್ತಿತರರಿದ್ದರು.