ರಾಮನ ನಡೆಯನ್ನು ನಾವೆಲ್ಲರೂ ಅನುಸರಿಸೋಣ: ಪೇಜಾವರ ಶ್ರೀ

| Published : Apr 29 2024, 01:32 AM IST

ರಾಮನ ನಡೆಯನ್ನು ನಾವೆಲ್ಲರೂ ಅನುಸರಿಸೋಣ: ಪೇಜಾವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಧರ ಸ್ವಾಮಿಗಳ ವೇದಾಂತಗಳ ಸಿಂಚನ ಧ್ವನಿ ಮುದ್ರಿಕೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ನೀಡುವುದು ದೊಡ್ಡ ಕಾರ್ಯವಾಗಿದೆ.

ಹೊನ್ನಾವರ: ಭರತನು ರಾಮನ ಪಾದುಕೆ ಮುಂದಿಟ್ಟು ರಾಜ್ಯಭಾರ ಮಾಡಿದಂತೆ, ಶ್ರೀಧರ ಸ್ವಾಮಿಗಳ ವೇದಾಂತ ಸಾಮ್ರಾಜ್ಯವನ್ನು ಜಾನಕಿಯಮ್ಮ ಹಾಗೂ ಜನಾರ್ದನ ಮುನ್ನಡೆಸುತ್ತಿದ್ದಾರೆ ಎಂದು ಉಡುಪಿ ಪೇಜಾವರ ಅಧೋಕ್ಷ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

ಪಟ್ಟಣದ ರಾಮತೀರ್ಥದ ಶ್ರೀಧರ ಆಶ್ರಮದಲ್ಲಿ ಸದ್ಗುರು ಭಗವಾನ್ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಠಾಪನಾ ಸುವರ್ಣ ಮಹೊತ್ಸವ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದರು.

ಶ್ರೀಧರ ಸ್ವಾಮಿಗಳ ವೇದಾಂತಗಳ ಸಿಂಚನ ಧ್ವನಿ ಮುದ್ರಿಕೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ನೀಡುವುದು ದೊಡ್ಡ ಕಾರ್ಯವಾಗಿದೆ. ಒಳ್ಳೆಯ ವಿಚಾರಗಳು ನಿರಂತರವಾಗಿ ದೂರಕಬೇಕಾದರೆ, ಅದನ್ನು ಮುದ್ರಿಸಿ ನೀಡುವುದರಿಂದ ಪ್ರತಿಯೋರ್ವರ ಮನದಲ್ಲಿ ಶಾಶ್ವತವಾಗಿ ಇರಲಿದೆ. ರಾಮ- ರಾವಣನು ಆದರ್ಶ ಪುರುಷರು. ಸಮಾಜದಲ್ಲಿ ಹೇಗೆ ಇರಬೇಕೆಂದು ರಾಮ ತಿಳಿಸಿದರೆ, ಸಮಾಜದಲ್ಲಿ ಹೇಗಿರಬಾರದೆಂದು ರಾವಣನು ತೋರಿಸಿದ್ದಾನೆ. ಸಮಾಜದ ಸುಖಕ್ಕೋಸ್ಕರ ಸ್ವಾರ್ಥವನ್ನೆಲ್ಲ ತ್ಯಾಗ ಮಾಡಿದ ರಾಮನ ನಡೆಯನ್ನು ನಾವೆಲ್ಲರೂ ಅನುಸರಿಸೋಣ ಎಂದು ಹೇಳಿದರು.ಸುವರ್ಣಸೌಧ ಒಬ್ಬರಿಂದ ನಿರ್ಮಾಣ ಸಾಧ್ಯವಿಲ್ಲ. ಶ್ರೀಧರ ಸ್ವಾಮಿಗಳ ಗ್ರಂಥ ಪ್ರಕಾಶನ ಬಿಡುಗಡೆಗೆ ಎಲ್ಲರ ಸಹಕಾರವಿದೆ. ಹಾಗೆಯೇ ಉತ್ತಮ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದರು.

ಪತಂಜಿಲಿ ವೀಣಾಕರ್ ಮಾತನಾಡಿ, ಪಾದುಕಾ ಪ್ರತಿಷ್ಠಾಪನೆಯಾಗಿ 50 ವರ್ಷಗಳಾಗಿವೆ. ಶ್ರೀಧರ ಸ್ವಾಮಿಗಳ ಮಾರ್ಗದರ್ಶನವು ಪುಸ್ತಕ ರೂಪದಲ್ಲಿ ಈಗ ಶ್ರೀಗಳಿಂದ ಬಿಡುಗಡೆಯಾಗಿದೆ. ಇದನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಆಶ್ರಮಕ್ಕೆ ನೆರವಾದವರನ್ನು ಶ್ರೀಗಳು ಗೌರವಿಸಿದರು. ಹಿರಿಯ ಪತ್ರಕರ್ತ ಜಿ.ಯು. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀಧರ ಸ್ವಾಮಿಗಳ ಕೃತಿಗಳ ಕುರಿತು ವೆಂಕ್ರಟಮಣ ಭಟ್ ಮಾತನಾಡಿದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀಗಳು, ಶ್ರೀರಾಮ ದೇವಸ್ಥಾನ, ರಾಮೇಶ್ವರ ದೇವರು, ದತ್ತಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮುಂಜಾನೆಯಿಂದ 1008 ಗಣಪತಿ ಉಪನಿಷತ್, ಶ್ರೀ ಶ್ರೀಧರ ಸ್ವಾಮಿಗಳ ಪಾದುಕೆಗಳಿಗೆ ರುದ್ರಾಭಿಷೇಕ, 1008 ಶ್ರೀ ಪುರುಷಸೂಕ್ತ , ಶ್ರೀ ಸೂಕ್ತ ಅಭಿಷೇಕ, ಫಲಪಂಚಾಮೃತ ಅಭಿಷೇಕ, ವಿಷ್ಣುಸಹಸ್ರನಾಮ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾಮಂಗಳಾರತಿ, ಮಹಾಪೂಜೆ, ಮಹಾಪ್ರಸಾದ ವಿತರಣೆ ಜರುಗಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಮೊದಲು ಗಾನತರಂಗಿಣಿ ಟ್ರಸ್ಟ್‌ನ ವಸುಧಾ ಜಿ., ಎಂ.ಎಸ್. ಗಿರಿಧರ ಅವರಿಂದ ದಾಸಸಿಂಚನ ಕಾರ್ಯಕ್ರಮ ಜರುಗಿತು.