ರಾಷ್ಟ್ರದ ರಕ್ಷಣೆಗೆ ನಾವೆಲ್ಲ ಕಂಕಣಬದ್ಧರಾಗೋಣ: ರವಿರಾಜ್ ದೀಕ್ಷಿತ್

| Published : Aug 16 2024, 12:48 AM IST

ಸಾರಾಂಶ

ಜಲಧಾರೆ, ಹಸಿರು ಹಂದರ, ಕಡಲ ತೀರ, ಸುಂದರ ಗಿರಿ ಶಿಖರ, ನಿಸರ್ಗ ಸ್ವರ್ಗದಲ್ಲೊಂದು ಸುಂದರ ನಗರ, ನಮ್ಮ ಹೊನ್ನಾವರವು ಪ್ರಾಕೃತಿಕವಾಗಿ ಸುಂದರ ಪ್ರದೇಶ ಎಂದು ಹೊನ್ನಾವರ ತಹಸೀಲ್ದಾರ್‌ ರವಿರಾಜ್ ದೀಕ್ಷಿತ್ ಹೇಳಿದರು.

ಹೊನ್ನಾವರ: ನಾವೆಲ್ಲರೂ ಭಾರತೀಯರು ಎಂಬ ಹೆಮ್ಮೆ ಇದ್ದಾಗ ಮಾತ್ರ ನಮ್ಮಲ್ಲಿ ಏಕತೆ, ಅಭಿಮಾನ ಮೂಡಲು ಸಾಧ್ಯ. ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಾಷ್ಟ್ರದ ರಕ್ಷಣೆಗೆ ನಾವೆಲ್ಲ ಕಂಕಣಬದ್ಧರಾಗೋಣ ಎಂದು ತಹಸೀಲ್ದಾರ್‌ ರವಿರಾಜ್ ದೀಕ್ಷಿತ್ ಕರೆ ನೀಡಿದರು.

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಜಲಧಾರೆ, ಹಸಿರು ಹಂದರ, ಕಡಲ ತೀರ, ಸುಂದರ ಗಿರಿ ಶಿಖರ, ನಿಸರ್ಗ ಸ್ವರ್ಗದಲ್ಲೊಂದು ಸುಂದರ ನಗರ, ನಮ್ಮ ಹೊನ್ನಾವರವು ಪ್ರಾಕೃತಿಕವಾಗಿ ಸುಂದರ ಪ್ರದೇಶ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತ ನೆಲ ಇದು ಎಂದು ಹೇಳಿದರು.

ಭಾರತಕ್ಕೆ ಸ್ವಾತಂತ್ರ್ಯ ಬ್ರಿಟಿಷರಿಂದ ಸುಲಭವಾಗಿ ದೊರೆಯಲಿಲ್ಲ. ಇದಕ್ಕಾಗಿ ಹಲವಾರು ವರ್ಷಗಳ ಹೋರಾಟದಲ್ಲಿ ಒಂದು ಗುಂಪು ಹಿಂಸೆಯ ಮಾರ್ಗವನ್ನು ಹಿಡಿದರೆ ಇನ್ನೊಂದು ಗುಂಪು ಅಹಿಂಸೆಯ ಮಾರ್ಗವನ್ನು ಹಿಡಿದು ಹೋರಾಡಿತು. ಇಬ್ಬರ ಗುರಿ ಒಂದೇ ಆಗಿತ್ತು. ಅದೇ "ವಂದೇ ಮಾತರಂ " ಎಂಬ ತತ್ವ ಭಾರತವನ್ನು ಸ್ವತಂತ್ರಗೊಳಿಸಿತು. ಭಾರತವು ಪ್ರಗತಿ ಪಥದಲ್ಲಿ ಸಾಗಲು ನಮ್ಮೆಲ್ಲರ ಪ್ರಾಮಾಣಿಕವಾದ ಸೇವೆ ಅತಿ ಅಗತ್ಯವಾಗಿದ್ದು, ಆ ದಿಸೆಯಲ್ಲಿ ಎಲ್ಲರೂ ಪ್ರಯತ್ನಿಸೋಣ ಎಂದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗೋವಿಂದ ಮಂಜು ಗೌಡ ಅವರನ್ನು ಗೌರವಿಸಲಾಯಿತು. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.

ಗ್ರೇಡ್-2 ತಹಸೀಲ್ದಾರ್ ಉಷಾ ಪಾವಸ್ಕರ್, ತಾಪಂ ಇಒ ಜಿ.ಎಸ್‌. ನಾಯ್ಕ, ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಉಪಸ್ಥಿತರಿದ್ದರು.