ಸಾರಾಂಶ
ಭೌತಿಕವಾದುದನ್ನು ಹಾಳು ಮಾಡಬಹುದು. ಭಕ್ತಿಯ ಮನಸ್ಸನ್ನು ನಾಶಪಡಿಸುವುದು ಎಂದಿಗೂ ಸಾಧ್ಯವಿಲ್ಲ.
ಹಾನಗಲ್ಲ: ನಮ್ಮೊಳಗಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು, ವೈಮನಸ್ಸು ದೂರ ಮಾಡಬೇಕಿದೆ. ಎಲ್ಲರೂ ಒಂದು ಎನ್ನುವ ಭಾವದಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಹೊಂಬಳಿ ಗ್ರಾಮದಲ್ಲಿ ರಾಮಲಿಂಗ ವ ಬಸವೇಶ್ವರ ದೇವಸ್ಥಾನದ ಮಂಗಲ ಭವನ ಹಾಗೂ ದಾಸೋಹ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಆಧುನಿಕತೆ ಪ್ರತಿಯೊಂದು ಕ್ಷೇತ್ರಕ್ಕೂ ಕಾಲಿಟ್ಟಿದೆ. ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ ಎಂದರು.
ಭಗವಂತನಲ್ಲಿ ಭಕ್ತಿ, ಶ್ರದ್ಧೆ, ನಂಬಿಕೆ ಹೊಂದಿದ್ದೇವೆ. ಸೃಷ್ಟಿಯ ಮುನಿಸಿನಿಂದ ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರೈತನ ಬದುಕು ಚಿಂತಾಜನಕವಾಗಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಭೇದಭಾವ ಮಾಡದೇ ಜತೆಗೂಡಿ ಹೆಜ್ಜೆ ಹಾಕುವ ದೃಢಸಂಕಲ್ಪ ಮಾಡಬೇಕಿದೆ ಎಂದು ಹೇಳಿದ ಅವರು, ಸಮುದಾಯ ಭವನಕ್ಕೆ ₹10 ಲಕ್ಷ, ಗ್ರಾಮದ ರಸ್ತೆ ಸುಧಾರಣೆಗೆ ₹15 ಲಕ್ಷ ಹಾಗೂ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹5 ಲಕ್ಷ ಅನುದಾನ ದೊರಕಿಸಲಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಭೌತಿಕವಾದುದನ್ನು ಹಾಳು ಮಾಡಬಹುದು. ಭಕ್ತಿಯ ಮನಸ್ಸನ್ನು ನಾಶಪಡಿಸುವುದು ಎಂದಿಗೂ ಸಾಧ್ಯವಿಲ್ಲ. ಮನಸ್ಸೇ ಮಂದಿರ ಎನ್ನುತ್ತೇವೆ. ಧಾರ್ಮಿಕ ಸಂಸ್ಕಾರಗಳು ಮನಸ್ಸಿನಲ್ಲಿ ಭಕ್ತಿಯನ್ನು ಶಾಶ್ವತಗೊಳಿಸುತ್ತವೆ ಎಂದರು.ಮಾರನಬೀಡ ಗ್ರಾಪಂ ಉಪಾಧ್ಯಕ್ಷೆ ನಗೀನಾ ಹರವಿ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ಈರಣ್ಣ ಬೈಲವಾಳ, ಆದರ್ಶ ಶೆಟ್ಟಿ, ಗನಿ ಪಟೇಲ್, ಭರಮಣ್ಣ ಶಿವೂರ, ಎಂ.ಎ. ನೆಗಳೂರ, ಕುಮಾರಣ್ಣ ಮಿರ್ಜಿ, ಬಸಪ್ಪ ಚನ್ನಕ್ಕನವರ, ಬಸವರಾಜ ಖೇಮಾಜಿ, ಬಸವರಾಜ ಬೆಡಗಿ, ಯಲ್ಲಪ್ಪ ಹಾನಗಲ್, ಸಿದ್ದಪ್ಪ ಚೆಂಗಳಮ್ಮನವರ, ಮಹಲಿಂಗಪ್ಪ ಹಾದಿ, ಶಂಕರಗೌಡ ಪಾಟೀಲ ಇದ್ದರು.