ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ನೆಲ ಮಾನವೀಯತೆಯ ಮೇರು ಸಂಸ್ಕೃತಿಯನ್ನು ಹೊಂದಿದ್ದು, ವಿದ್ಯಾರ್ಥಿಗಳು ನೆಲದ ಇತಿಹಾಸದ ಮಹತ್ವವನ್ನು ಅರಿತು ಈ ಪರಂಪರೆಯ ರಾಯಭಾರಿಗಳಾಗಿ ರೂಪುಗೊಳ್ಳಬೇಕು ಎಂದು ತುಂಗಾ ವಿಧ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್ ಹೇಳಿದರು.
ತೀರ್ಥಹಳ್ಳಿ: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ನೆಲ ಮಾನವೀಯತೆಯ ಮೇರು ಸಂಸ್ಕೃತಿಯನ್ನು ಹೊಂದಿದ್ದು, ವಿದ್ಯಾರ್ಥಿಗಳು ನೆಲದ ಇತಿಹಾಸದ ಮಹತ್ವವನ್ನು ಅರಿತು ಈ ಪರಂಪರೆಯ ರಾಯಭಾರಿಗಳಾಗಿ ರೂಪುಗೊಳ್ಳಬೇಕು ಎಂದು ತುಂಗಾ ವಿಧ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್ ಹೇಳಿದರು.ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಿದ್ದ ವಸ್ತು ಪ್ರದರ್ಶನ, ಇತಿಹಾಸ ಮಂಟಪ ಹಾಗೂ ಪರಂಪರಾಕೂಟದಲ್ಲಿ ಪಾಲ್ಗೊಂಡು ಗೋಡೆ ಪತ್ರಿಕೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ವಿಧ್ಯಾರ್ಥಿಗಳು ಸಾಮಾಜಿಕ ಮತ್ತು ಮಾನವೀಯತೆಯ ಕಾಳಜಿ ಮತ್ತು ಚಿಂತನೆಯೊಂದಿಗೆ ಸಮಾಜದ ಆಸ್ತಿಯಾಗಿ ರೂಪುಗೊಳ್ಳುವ ಅಗತ್ಯವಿದೆ ಎಂದರು.ಶಾಂತಿಯಿಂದಲೇ ಕ್ರಾಂತಿ ಸಾಧಿಸಿದ ಮಹಾತ್ಮ ಗಾಂಧಿಯವರ ಆದರ್ಶ, ಜಗತ್ತಿನಲ್ಲೇ ಶ್ರೇಷ್ಠವೆನಿಸಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾಗಿರುವ ನಮ್ಮ ಸಂವಿಧಾನ ಇತಿಹಾಸದ ಶ್ರೇಷ್ಠತೆಗೆ ಪ್ರಮುಖ ಕಾರಣವಾಗಿದೆ. ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ. ಈ ನೆಲದ ಇತಿಹಾಸ ಜ್ಞಾನ ಪರಂಪರೆ ನಿಮ್ಮ ಜೀವನಕ್ಕೆ ಮಾರ್ಗಸೂಚಿಯೂ ಆಗಿದೆ. ಆಳವಾದ ಅಧ್ಯಯನದ ಮೂಲಕ ಇತಿಹಾಸದ ಮಹತ್ವವನ್ನು ಅಭ್ಯಸಿಸಬೇಕು ಎಂದು ಕರೆ ನೀಡಿದರು.ನಿವೃತ್ತ ಶಿಕ್ಷಕ ಮಹಮದ್ ಅವರು, ಮೊಗಲರ ಕಾಲದಿಂದ ಮೊದಲ್ಗೊಂಡು ಕರೆನ್ಸಿ ನೋಟು ನಾಣ್ಯಗಳ ಇತಿಹಾಸದ ಕುರಿತು ವಿವರವಾಗಿ ಉಪನ್ಯಾಸ ನೀಡಿದರು.
ಆಡಳಿತ ಮಂಡಳಿಯ ಸಹಕಾರ್ಯದರ್ಶಿ ಸೊಪ್ಪುಗುಡ್ಡೆ ರಾಘವೇಂದ್ರ, ನಿಕಟಪೂರ್ವ ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ, ಶೈಕ್ಷಣಿಕ ಸಮಿತಿ ಸಲಹೆಗಾರರಾದ ಬೆಂಗಳೂರಿನ ಲೋಕೇಶ್ ಸಮಯೋಚಿತವಾಗಿ ಮಾತನಾಡಿದರು.ಪ್ರಾಂಶುಪಾಲ ಡಾ.ಆರ್.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪಿಯು ಪ್ರಾಂಶುಪಾಲ ಕೆ.ಎಲ್.ಪ್ರಸನ್ನ ವೇದಿಕೆಯಲ್ಲಿದ್ದರು.ಇತಿಹಾಸ ವಿಭಾಗದ ಮುಖ್ಯಸ್ಥ ಬಿ.ಸಿ.ಮೋಹನ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ರಾಂತಿ ಪೈ ಪ್ರಾರ್ಥಿಸಿದರು. ಪ್ರೀತಿ.ಡಿ.ಸಿ ವಂದಿಸಿದರು. ಕನ್ನಡ ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.