ಮಂದಿರದ ಶಿಲಾನ್ಯಾಸ ಒಂದು ಕಟ್ಟಡದ ಆರಂಭ ಮಾತ್ರವಲ್ಲ. ಧರ್ಮ ಸಂಸ್ಕಾರ ಸೇವೆ ಮತ್ತು ಸೌಹಾರ್ದದ ಹೊಸ ಯುಗಕ್ಕೆ ನಾಂದಿ. ಮಂದಿರ ನಿರ್ಮಾಣ ಜೊತೆಗೆ ಮನಸ್ಸಿನ ನಿರ್ಮಾಣವಾಗಬೇಕು. ಕಲ್ಲಿನಿಂದ ಮಂದಿರ ನಿರ್ಮಿಸಿದರೆ ಸಂಸ್ಕಾರದಿಂದ ಸುಭದ್ರ ಸಮಾಜ ನಿರ್ಮಿಸಬಹುದೆಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮಂದಿರದ ಶಿಲಾನ್ಯಾಸ ಒಂದು ಕಟ್ಟಡದ ಆರಂಭ ಮಾತ್ರವಲ್ಲ. ಧರ್ಮ ಸಂಸ್ಕಾರ ಸೇವೆ ಮತ್ತು ಸೌಹಾರ್ದದ ಹೊಸ ಯುಗಕ್ಕೆ ನಾಂದಿ. ಮಂದಿರ ನಿರ್ಮಾಣ ಜೊತೆಗೆ ಮನಸ್ಸಿನ ನಿರ್ಮಾಣವಾಗಬೇಕು. ಕಲ್ಲಿನಿಂದ ಮಂದಿರ ನಿರ್ಮಿಸಿದರೆ ಸಂಸ್ಕಾರದಿಂದ ಸುಭದ್ರ ಸಮಾಜ ನಿರ್ಮಿಸಬಹುದೆಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ತಾಲೂಕಿನ ಕೋರವಾರ ಮಹಾಂತೇಶ್ವರ ಶಿಲಾ ಮಂಟಪದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಮಂಗಳವಾರ ಆಶೀರ್ವಚನ ನೀಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಂದಿರ ದೇವಸ್ಥಾನಗಳಿಗೆ ಪವಿತ್ರ ಇತಿಹಾಸವುಂಟು. ಮಂದಿರವೆಂದರೆ ಕೇವಲ ಕಟ್ಟಡವಲ್ಲ. ಸಂಸ್ಕಾರದ ಕೇಂದ್ರಗಳು. ಭಕ್ತಿ ಸಂಸ್ಕೃತಿ ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ತಾಣವಾಗಿದೆ. ಇಂದು ಶಿಲಾನ್ಯಾಸ ಮಾಡುತ್ತಿರುವುದು ಕೇವಲ ಶಿಲೆಯ ಮಂದಿರ ಅಡಿಪಾಯವಲ್ಲ. ಧರ್ಮನಿಷ್ಠ ಸಮಾಜ ನಿರ್ಮಾಣದ ಅಡಿಪಾಯವಾಗಿದೆ. ಪೂಜೆ ಆಚರಣೆಗಳ ಜತೆಗೆ ದಯೆ, ಸೇವೆ, ಸತ್ಯ, ಪ್ರಾಮಾಣಿಕತೆ ಮತ್ತು ಪರೋಪಕಾರಗಳಿಗೆ ಆದ್ಯತೆ ದೊರೆಯಬೇಕೆಂದು ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವ ಕೇಂದ್ರಗಳಾಗಬೇಕು. ಬಸವಲಿಂಗ ಶಿವಾಚಾರ್ಯರು ತಮ್ಮ ಮೂಲ ಮಠದ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಎಲ್ಲ ಭಕ್ತ ಸಮುದಾಯಕ್ಕೆ ಹರುಷ ತಂದಿದೆ. ಒಂದು ವರುಷದೊಳಗೆ ಮಹಾಂತೇಶ್ವರ ಶಿಲಾಮಂಟಪ ಪೂರ್ಣಗೊಂಡು ಮತ್ತೊಮ್ಮೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುತ್ತೇವೆ. ಶ್ರೀಗಳವರ ಕ್ರಿಯಾ ಕರ್ತೃತ್ವ ಶಕ್ತಿ ಕಂಡು ಹರ್ಷ ವ್ಯಕ್ತಪಡಿಸಿದರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆ ಕೇವಲ ಆಚರಣೆಯಲ್ಲಿ ಉಳಿಯದೇ ಅದರ ಹಿಂದಿರುವ ತತ್ವ ಮತ್ತು ಜೀವನ ಮೌಲ್ಯಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅನ್ನದಾನ ವಿದ್ಯಾದಾನ ಆರೋಗ್ಯ ಸೇವೆ ಪರಿಸರ ಸಂರಕ್ಷಣೆ ಮೊದಲಾದ ಸೇವಾ ಕಾರ್ಯಗಳಿಗೆ ಶಿಲಾ ಮಂಟಪ ಪ್ರೇರಣಾ ಕೇಂದ್ರವಾಗಬೇಕೆಂದು ಆಶಿಸಿದರು.

ಮಠಾಧ್ಯಕ್ಷ ಬಸವಲಿಂಗ ಶಿವಾಚಾರ್ಯರು ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ಧರ್ಮ ವೀರಶೈವ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸಂಸ್ಕೃತಿ ನಮ್ಮದು. ವೈಚಾರಿಕತೆಯ ಹೆಸರಿನಲ್ಲಿ ಸಂಸ್ಕೃತಿ ಸಭ್ಯತೆ ಮರೆಯಬಾರದು. ಶಿಲಾಮಂಟಪಕ್ಕೆ ಇಂದು ಶಿಲಾನ್ಯಾಸ ನೆರವೇರಿದೆ. ಮುಂದೆ ನಿಮ್ಮೆಲ್ಲರ ನೆರವು ಸಹಕಾರದಿಂದ ಮಂಟಪ ನಿರ್ಮಾಣ ಮಾಡಿ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ಪಂಚಪೀಠದ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಗುವುದೆಂದರು. ಮಮದಾಪುರ ಮುರುಘೇಂದ್ರ ಸ್ವಾಮೀಜಿ, ದೇವೂರು ಮರುಳಾರಾಧ್ಯ ಬಸವಲಿಂಗ ಶಿವಾಚಾರ್ಯರು, ಅಣಜಿ ಚನ್ನವೀರ ದೇವರು, ಕೆರೂಟಗಿ ಶಿವಬಸವಸ್ವಾಮೀಜಿ ಪಾಲ್ಗೊಂಡಿದ್ದರು.

ದೇವರಹಿಪ್ಪರಗಿ, ಗಿರಿಸಾಗರ, ಆಲಮೇಲ, ಮುತ್ತತ್ತಿ, ದೇವೂರು, ಮುಖೇಡ, ಕೆಂಭಾವಿ, ಗುಂಡಕನಾಳ, ಕೊಕಟನೂರು, ಸಿಂದಗಿ, ಯಂಕಂಚಿ, ಬರ್ದಾಪುರ, ದೇವಣಿ, ಮಠಾಧೀಶರು ಉಪಸ್ಥಿತರಿದ್ದರು. ಡಾ.ನಿಂಗನಗೌಡ ರಾಜಶೇಖರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬ.ನಾಲವಾದಗಿ ಬಸನಗೌಡ ಎಸ್. ಪಾಟೀಲ ಮಹಾಪ್ರಸಾದ ಸೇವೆ ಸಲ್ಲಿಸಿದರು. ಯಶವಂತ ಬಡಿಗೇರ ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಜೇರಟಗಿ ಮಡಿವಾಳೇಶ್ವರ ಶಾಸ್ತ್ರಿಗಳು ನಿರೂಪಿಸಿದರು.