ಈ ಬಾರಿ ದಸರಾ ಮಹೋತ್ಸವವನ್ನು ಕೇವಲ ವಿಜೃಂಭಣೆಯಿಂದ ಆಚರಿಸುವುದಕ್ಕೆ ಸೀಮಿತಗೊಳಿಸದೆ, ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ಭಾವನೆಯೊಂದಿಗೆ ಆಚರಿಸೋಣ. ಹಿಂದೆಂದೂ ಕಾಣದಂತಹ ಭೀಕರ ಬರಗಾಲವನ್ನು ಈ ಬಾರಿ ಅನುಭವಿಸುತ್ತಿದ್ದು, ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜನರು, ರೈತರು ಹಾಗೂ ಜಾನುವಾರುಗಳು ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸೋಣ ಎಂದು ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ. ಜಯಚಂದ್ರ ಆಶಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಈ ಬಾರಿ ದಸರಾ ಮಹೋತ್ಸವವನ್ನು ಕೇವಲ ವಿಜೃಂಭಣೆಯಿಂದ ಆಚರಿಸುವುದಕ್ಕೆ ಸೀಮಿತಗೊಳಿಸದೆ, ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ಭಾವನೆಯೊಂದಿಗೆ ಆಚರಿಸೋಣ. ಹಿಂದೆಂದೂ ಕಾಣದಂತಹ ಭೀಕರ ಬರಗಾಲವನ್ನು ಈ ಬಾರಿ ಅನುಭವಿಸುತ್ತಿದ್ದು, ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜನರು, ರೈತರು ಹಾಗೂ ಜಾನುವಾರುಗಳು ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸೋಣ ಎಂದು ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ. ಜಯಚಂದ್ರ ಆಶಿಸಿದರು.

ಶಿರಾ ನಗರದಲ್ಲಿ ಭಾನುವಾರ ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ಬನ್ನಿಮರದ ಹೆಬ್ಬಾಗಿಲಿನಿಂದ ಬನ್ನಿಮಂಟಪದವರೆಗೆ ಮಾಡಲಾಗಿದ್ದ ದೀಪಾಲಂಕಾರವನ್ನು ಉದ್ಘಾಟಿಸಿ ಮಾತನಾಡಿದರು. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳ ಕಾಲ ಶಕ್ತಿ ಸ್ವರೂಪಿಣಿಯಾದ ದುರ್ಗಾದೇವಿಯ ವಿವಿಧ ರೂಪಗಳನ್ನು ಆರಾಧಿಸುವ ಪವಿತ್ರ ಹಬ್ಬ. ದುರ್ಗಾದೇವಿಯು ಮಹಿಷಾಸುರನನ್ನು ಸಂಹರಿಸಿ ಧರ್ಮವನ್ನು ಸ್ಥಾಪಿಸಿದ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ದುಷ್ಟಶಕ್ತಿಗಳ ವಿರುದ್ಧ ಶಿಷ್ಟಶಕ್ತಿಗಳ ವಿಜಯ, ಅಸತ್ಯದ ವಿರುದ್ಧ ಸತ್ಯದ ಗೆಲುವು ಹಾಗೂ ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ನವರಾತ್ರಿ ಸಾರುತ್ತದೆ. ಶಿರಾ ನಗರದಲ್ಲಿಯೂ ನವರಾತ್ರಿ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೀಪಾಲಂಕಾರಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಪ್ರಸ್ತುತ ಮಳೆ ಕೊರತೆ ಮತ್ತು ಬರಗಾಲದಿಂದ ಕೃಷಿ ಚಟುವಟಿಕೆಗಳು ಹಾಗೂ ಜನಜೀವನದ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ, ನಾಡಿನ ಜನರ ಸುಖ-ಶಾಂತಿ, ರೈತರ ಸಮೃದ್ಧಿ ಮತ್ತು ಉತ್ತಮ ಮಳೆಗಾಗಿ ದೇವಿಯ ಆರಾಧನೆ ಮಾಡುವುದು ಮುಖ್ಯವಾಗಿದೆ. ಹಬ್ಬದ ಆಚರಣೆಯೊಂದಿಗೆ ಪರಿಸರ ಸಂರಕ್ಷಣೆ, ನೀರಿನ ಮಿತಬಳಕೆ ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮಾನವೀಯ ಮೌಲ್ಯಗಳಿಗೂ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಮೀಸಲಾತಿ ಅಸಮರ್ಪಕ:

ಶಿರಾ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿ ಸಮರ್ಪಕ ಲೆಕ್ಕಾಚಾರ ನಡೆಸದೆ ಏಕಪಕ್ಷೀಯವಾಗಿ ಮೀಸಲಾತಿ ಕಲ್ಪಿಸಿರುವುದು ಗಮನಕ್ಕೆ ಬಂದಿದೆ. ತಾಲೂಕಿನ ಏಳು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಕಲ್ಪಿಸುವ ಲೆಕ್ಕಾಚಾರದಲ್ಲಿ ಮೂರು ಕ್ಷೇತ್ರಗಳನ್ನು ಮೀಸಲಿಡಬೇಕಿತ್ತು. ಆದರೆ, ಐದು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಟ್ಟು, ಉಳಿದ ಎರಡು ಕ್ಷೇತ್ರಗಳನ್ನು ಇತರರಿಗೆ ನೀಡಿರುವುದು ಸರಿಯಲ್ಲ. ಜಿಲ್ಲಾವಾರು ಲೆಕ್ಕಾಚಾರವನ್ನು ಮಾತ್ರ ಆಧರಿಸುವ ಬದಲು, ಪ್ರತಿ ಕ್ಷೇತ್ರದ ಸಾಮಾಜಿಕ ಹಾಗೂ ಜಾತಿ ಸಮೀಕರಣಗಳನ್ನು ಪರಿಗಣಿಸಿ ಮೀಸಲಾತಿ ನಿಗದಿಪಡಿಸಿದ್ದರೆ ಇಂತಹ ಗೊಂದಲಗಳು ಉಂಟಾಗುತ್ತಿರಲಿಲ್ಲ. ಮೀಸಲಾತಿ ನಿಗದಿಯಲ್ಲಿ ಕ್ಷೇತ್ರವಾರು ಎಲ್ಲ ಜಾತಿಗಳನ್ನೂ ಪರಿಗಣಿಸುವ ಅಗತ್ಯವಿದೆ. ಮೀಸಲಾತಿ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದರಿಂದ, ಸಂಬಂಧಪಟ್ಟವರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಈ ವಿಚಾರವಾಗಿ ತಾವು ಕೂಡ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಗಮನ ಸೆಳೆಯುವುದಾಗಿ ಟಿ.ಬಿ. ಜಯಚಂದ್ರ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್, ಪೌರಾಯುಕ್ತ ರುದ್ರೇಶ್, ಸ್ಥಾಯಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ, ಶಿರಾ ಯೋಜನಾ ಪ್ರಾಧಿಕಾರದ ಸದಸ್ಯ ಸುನಿಲ್, ಮಾಲಿ ಸುರೇಶ್, ನಾಗೇಂದ್ರ ಕುಮಾರ್, ಎಂ ಎನ್ ರಾಜು, ನಗರಸಭೆ ಸದಸ್ಯರಾದ ಸುಶೀಲ ವಿರುಪಾಕ್ಷ, ರಾಧಾಕೃಷ್ಣ, ಮಂಜುಳಾ ಶೇಷ ನಾಯಕ್, ದುರ್ಗಾ ಪ್ರಸಾದ್ , ಮುಖಂಡರು ಹಾಗೂ ದಸರಾ ಮಹೋತ್ಸವದ ಸದಸ್ಯರು ಹಾಜರಿದ್ದರು.