ಸಾರಾಂಶ
ಹಾವೇರಿ: ದೇಶದ ಸಮಗ್ರತೆ, ರಾಷ್ಟ್ರಾಭಿಮಾನವನ್ನು ಎತ್ತಿಹಿಡಿಯೋಣ. ದೇಶದ ರಕ್ಷಣೆಗೆ ಹಾಗೂ ಭಯೋತ್ಪಾದನೆ ನಿರ್ಮೂಲನೆ ಎಲ್ಲರೂ ಕಂಕಣಬದ್ಧರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಾವೇರಿ ಜಿಲ್ಲೆ ವಿಶಿಷ್ಟ ಸಂಸ್ಕೃತಿಯನ್ನು, ವಿಚಾರಧಾರೆ, ಸಹೋದರತ್ವ ಪೋಷಿಸಿದ ಭೂಮಿ. ಈ ನೆಲದಲ್ಲಿ ಶಿಶುನಾಳ ಷರೀಫರು, ಕನಕದಾಸರು, ಸರ್ವಜ್ಞರು ಜನಿಸಿ ಭ್ರಾತೃತ್ವ, ಸೋದರತೆ, ಜಾತ್ಯತೀತ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಬಹು ಪರಂಪರೆ, ಬಹು ಸಂಸ್ಕೃತಿಯ ಐಕ್ಯತೆ ಬದುಕು ಕಾಣುವ ಕನ್ನಡದ ನೆಲ. ಭಾರತೀಯ ಪರಂಪರೆಯನ್ನು ಮುನ್ನಡೆಸುವ ಹೊಣೆಗಾರಿಕೆಯ ಸಂಕಲ್ಪವನ್ನು ನಾವು ಮಾಡೋಣ. ಅಖಂಡತೆ, ಸೋದರತೆ, ಸಮಾನತೆ, ಅಹಿಂಸೆಯೇ ನಮ್ಮ ಮಂತ್ರ. ನಮ್ಮ ಹಿರಿಯರು ಹಾಕಿಕೊಟ್ಟ ಜಾತ್ಯತೀತ, ಧರ್ಮಾತೀತ ಮಾರ್ಗದಲ್ಲಿ ನಡೆಯೋಣ ಎಂದರು.ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟ ಮಹನೀಯರ ಸ್ಮರಣೆ ಇಂದಿನ ಪೀಳಿಗೆಗೆ ನೆನಪಿಸಿಕೊಡುವುದು ಅವಶ್ಯವಾಗಿದೆ. ನಮ್ಮ ನೆಲದಿಂದ ಬ್ರಿಟಿಷರನ್ನು ಹೊರಹಾಕಲು ಅಸಂಖ್ಯಾತ ದೇಶಭಕ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶದೊಂದಿಗೆ ಹಾವೇರಿ ಜಿಲ್ಲೆಯ ನೆಲ ಕೂಡ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ ಎಂದರು.ನಮ್ಮ ಸರ್ಕಾರ ಅಭಿವೃದ್ಧಿಯ ಅನೇಕ ಕನಸುಗಳನ್ನು ಕಟ್ಟಿಕೊಂಡಿದೆ. ಅವುಗಳ ಸಾಕಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ವಿವಿಧ ಇಲಾಖೆಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜಕೀಯ ಸ್ವಾತಂತ್ರ್ಯದ ಜತೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರವನ್ನೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದೇ ಅರ್ಥಪೂರ್ಣ ಸ್ವಾತಂತ್ರ್ಯಾಚರಣೆ ಎಂದು ನಂಬಿದೆ. ಅಧಿಕಾರ, ಅವಕಾಶ ಮತ್ತು ಸಂಪತ್ತು ಸಮಾಜದ ಎಲ್ಲ ಜನರಿಗೂ ಹಾಗೂ ಎಲ್ಲ ವರ್ಗಗಳಿಗೂ ಹಂಚಿಕೆಯಾಗಬೇಕೆಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಇದು ನಮ್ಮ ಸರ್ಕಾರದ ಧ್ಯೇಯವೂ ಕೂಡ ಆಗಿದೆ. ಈ ನಿಟ್ಟಿನಲ್ಲಿ ಜನಪರವಾಗಿರುವ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳು ಈ ನಾಡಿನ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕ್ಷಿಯಾಗಿವೆ ಎಂದರು.ನಮ್ಮ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ರಾಜ್ಯದ ಮತ್ತು ಜಿಲ್ಲೆಯ ಜನತೆಗೆ ಹೊಸ ಚೈತನ್ಯ ನೀಡಿದೆ. ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ನಮ್ಮ ಜನಪರ ಯೋಜನೆಗಳ ಯಶಸ್ಸಿನ ಪ್ರತಿಫಲವನ್ನು ಸಂತೃಪ್ತ ಜನತೆಯ ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಮೈದೂರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಶರಣಮ್ಮ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))