ಕನ್ನಡಪ್ರಭ ವಾರ್ತೆ ಗುಡಿಬಂಡೆ
ವಿಶ್ವ ಶಾಂತಿ ಮತ್ತು ಸಮಸ್ತ ಮಾನವ ಕಲ್ಯಾಣಕ್ಕಾಗಿ ಭಗವಾನ ಮಹಾವೀರರು ಸಾವಿರಾರು ವರ್ಷಗಳ ಹಿಂದೆಯೇ ಬೋಧಿಸಿದ ಅಹಿಂಸಾ ತತ್ವವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್ ತಿಳಿಸಿದರು.ಪಟ್ಟಣದ ತಿರುಮಲ ನಗರದ 5ನೇ ವಾರ್ಡ್ ಏಡುಗರ ಅಕ್ಕಮ್ಮ ಲೇಔಟ್ನಲ್ಲಿ ಮಹಾವೀರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈನ ಧರ್ಮದ 24ನೇ ಹಾಗೂ ಕೊನೆಯ ತೀರ್ಥಂಕರರಾದ ಮಹಾವೀರರ ಜನ್ಮದಿನವು ಅತ್ಯಂತ ಪವಿತ್ರವಾದದ್ದು. ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು ಜನಿಸಿದ ಮಹಾವೀರರು, ಅಹಿಂಸೆ ಮತ್ತು ಸಮಾನತೆಯ ಮಹಾನ್ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ.
ಮಹಾವೀರರು ಸಾವಿರಾರು ವರ್ಷಗಳ ಹಿಂದೆ ಬೋಧಿಸಿದ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರು ಜೈನ ಸಮಾಜಕ್ಕೆ ಮಾತ್ರ ಬೋಧನೆ ಮಾಡಲಿಲ್ಲ. ಇಡೀ ಮಾನವ ಕಲ್ಯಾಣ ಬಯಸಿ, ಸನ್ಮಾರ್ಗ ತೋರಿದ್ದರು. ಅವರ ತತ್ವಾದರ್ಶಗಳು ಸರ್ವಕಾಲಿಕವಾದುದು. ಅವರ ಆಧರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಇಂತಹ ಸುಸಂದರ್ಭದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಸಂರಕ್ಷಣೆ ಮಾಡಬೇಕು ಎಂದರು.ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಹಾವೀರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಮಹಾವೀರರ ಕುರಿತು ಬಿಇಒ ಕೃಷ್ಣಕುಮಾರಿ ಮಾತನಾಡಿ, ಭಗವಾನ್ ಮಹಾವೀರ ಬೋಧಿಸಿದ ಅಹಿಂಸೆ, ಸತ್ಯ, ಅಪರಿಗ್ರಹ, ಅಚೌರ್ಯ, ಬ್ರಹ್ಮಚರ್ಯ ಮೊದಲಾದ ತತ್ವಗಳನ್ನು ನಾವು ನಿತ್ಯವೂ ಜೀವನದಲ್ಲಿ ಅನುಷ್ಠಾನ ಮಾಡಿ ಧರ್ಮ ಮಾರ್ಗದಲ್ಲಿ ನಡೆಯಬೇಕು. ಜಾಗತಿಕವಾಗಿ ಶಾಂತಿ ನೆಲೆಸಬೇಕಾದರೆ, ನಾವು ಮಹಾವೀರರು ಪ್ರತಿಪಾದಿಸಿದ ಅಹಿಂಸೆಯ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಪಪಂ ಮುಖ್ಯಾಧಿಕಾರಿ ಆರತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣ, ಕೃಷಿ ಇಲಾಖೆಯ ಕೇಶವರೆಡ್ಡಿ, ಕೆಡಿಪಿ ಸದಸ್ಯ ರಿಯಾಜ್, ಕಂದಾಯ ಇಲಾಖೆಯ ಶಿವಕುಮಾರ್, ಪರಿಸರವಾದಿಗಳಾದ ಚಾಂದ್ ಪಾಷ, ರಘು, ಪೊಲೀಸ್ ದೇವರಾಜ್, ವೆಂಕಟೇಶ್, ನಿತಿನ್ ಸೇರಿದಂತೆ ಹಲವರು ಇದ್ದರು.
30ಜಿಯುಡಿ1: ಪಟ್ಟಣದ ತಿರುಮಲ ನಗರದ 5ನೇ ವಾರ್ಡ್ನ ಏಡುಗರ ಅಕ್ಕಮ್ಮ ಲೇಔಟ್ನಲ್ಲಿ ಮಹಾವೀರ ಜಯಂತಿ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
30ಜಿಯುಡಿ2: ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಹಾವೀರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.