ಸಾರಾಂಶ
ಕೃಷಿ ಪ್ರಧಾನ ಭಾರತದಲ್ಲಿ ನ್ಯಾಯ ಕೇಳಿದ ರೈತರಿಗೆ ಗೋಲಿಬಾರ್ ರುಚಿ ತೋರಿಸಲಾಗುತ್ತಿದೆ, ನಮ್ಮಲ್ಲಿರುವ ಸಂಘಟಿತ ಹೋರಾಟ ಎಂಬ ಪಿಸ್ತೂಲ್ ಹಾಗೂ ನೈತಿಕತೆ ಗುಂಡುಗಳನ್ನೇ ಬಳಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಕ್ಕ ಉತ್ತರ ನೀಡೋಣ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕರೆ ನೀಡಿದರು.
ಬ್ಯಾಡಗಿ: ಕೃಷಿ ಪ್ರಧಾನ ಭಾರತದಲ್ಲಿ ನ್ಯಾಯ ಕೇಳಿದ ರೈತರಿಗೆ ಗೋಲಿಬಾರ್ ರುಚಿ ತೋರಿಸಲಾಗುತ್ತಿದೆ, ನಮ್ಮಲ್ಲಿರುವ ಸಂಘಟಿತ ಹೋರಾಟ ಎಂಬ ಪಿಸ್ತೂಲ್ ಹಾಗೂ ನೈತಿಕತೆ ಗುಂಡುಗಳನ್ನೇ ಬಳಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಕ್ಕ ಉತ್ತರ ನೀಡೋಣ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕರೆ ನೀಡಿದರು.
ಪಟ್ಟಣದ ವಿಎಸ್ಎಸ್ ಬ್ಯಾಂಕ್ ಮೊದಲ ಮಹಡಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಹಾವೇರಿಯಲ್ಲಿ ಗೊಬ್ಬರ ಕೇಳಿದವರಿಗೆ, ನರಗುಂದದಲ್ಲಿ ನೀರು ಕೇಳಿದವರಿಗೆ, ವೈಜ್ಞಾನಿಕ ದರ ಕೇಳಿದವರಿಗೆ ದೆಹಲಿಯಲ್ಲಿ ಗುಂಡಿನ ರುಚಿ ತೋರಿಸಲಾಗಿದೆ, ನರಗುಂದದ ಬಂಡಾಯ ದಿನದಿಂದ ಇಂತಹ ಪ್ರಯೋಗಗಳು ನಮ್ಮ ಮೇಲೆ ಇಂದಿಗೂ ನಡೆಯುತ್ತಿವೆ ಎಂದರು.ರೈತರ ರಕ್ಷಣೆಯ ಹೊಣೆಗಾರಿಕೆ ತೋರುತ್ತಿಲ್ಲ: ದೇಶದ ಜನರು ಸಂಕಷ್ಟಕ್ಕೆ ಸಿಲುಕಿದಾಗ ಪರಿಹಾರ ನೀಡಲೇಂದೇ ವಿಪತ್ತು ಪರಿಹಾರ ನಿಧಿ (ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್) ಸ್ಥಾಪನೆ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವೇ ಮಾಡಿದ ಕಾನೂನು ಪಾಲನೆ ಮಾಡುತ್ತಿಲ್ಲ. ಮಳೆಯಿಲ್ಲದೇ ಜಿಲ್ಲೆ ಪೂರ್ತಿ ಬರಗಾಲ ಘೋಷಣೆಯಾಗಿದೆ. ನಿಯಮದಂತೆ ಪ್ರತಿ ಎಕರೆಗೆ ರು. 8500 ಪರಿಹಾರ ನೀಡಬೇಕಾಗಿದೆ ಆದರೆ ಎರಡೂ ಸರ್ಕಾರಗಳು ಒಬ್ಬರ ಮೇಲೊಬ್ಬರು ದೂಷಣೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದು, ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು.ನಂಜುಂಡಸ್ವಾಮಿ ಚಿಂತನೆ ಅಗತ್ಯ: ಕಾಲ ಕಾಲಕ್ಕೆ ಸರ್ಕಾರಗಳನ್ನು ಎಚ್ಚರಿಸುವ ಕೆಲಸದಲ್ಲಿ ಸಂಘಟನೆಗಳು ನಿರತವಾಗಿವೆ. ರಾಜ್ಯ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಪ್ರೊ. ನಂಜುಂಡಸ್ವಾಮಿ ಅವರ ಚಿಂತನೆಗಳು ಪ್ರಸ್ತುತ ದಿನಗಳಲ್ಲಿ ರೈತ ಕುಲಕ್ಕೆ ಬಹಳಷ್ಟು ಅವಶ್ಯಕವಿದ್ದು ಅದರಲ್ಲೂ ಯುವ ರೈತರು ಖಂಡಿತವಾಗಿಯೂ ಇದನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.ನರೇಗಾದಿಂದ ರೈತರಿಗೆ ಸಂಕಷ್ಟ: ನರೇಗಾ ಯೋಜನೆ ಯಶಸ್ಸಿನಿಂದ ಸರ್ಕಾರಗಳು ಬೀಗುತ್ತಿರಬಹುದು. ಅಲ್ಲಿರುವ 349 ರು. ಕೂಲಿಯನ್ನು ಕೃಷಿಕರು ಕೊಡಲು ಸಾಧ್ಯವಾಗುತ್ತಿಲ್ಲ, ಬೆಳೆದಂತಹ ಬೆಳೆ ಯೋಗ್ಯವಾದ ಬೆಲೆ ಸಿಗದ ಕಾರಣ ಕೃಷಿಗೆ ನೇರವಾದ ಹೊಡೆತ ಬಿದ್ದಿದೆ, ಮೊದಲೇ ಕೂಲಿ ಕಾರ್ಮಿಕರ ಸಮಸ್ಯೆಯಿಂದ ಬಳಲುತ್ತಿರುವ ರೈತರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ, ಹೀಗಾಗಿ ನರೇಗಾ ಯೋಜನೆಯಿಂದ ನಮ್ಮ ರೈತರು ಅನಾನುಕೂಲ ಹೆಚ್ಚಾಗಿದೆ, ಯುವ ರೈತರು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸೇರ್ಪಡೆಗೊಳ್ಳಬೇಕು, ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕಾಗಿದೆ, ಸಂಘಟಿತರಾಗದಿದ್ದಲ್ಲಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.ಸಾನಿಧ್ಯ ವಹಿಸಿದ್ದ ಚನ್ನಮಲ್ಲಿಕಾರ್ಜನಶ್ರೀಗಳು ಮಾತನಾಡಿ, ಪ್ರಸ್ತಕ ವರ್ಷದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಕೃಷಿಕರು ಮತ್ತು ಕೃಷಿ ಅಭಿವೃದ್ಧಿ ಪೂರಕವಾದ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಹೀಗಾಗಿ ಎಲ್ಲಾ ಪಕ್ಷಗಳ ಸಿದ್ಧಾಂತಗಳು ಕೃಷಿಗೆ ವಿರುದ್ಧವಾಗಿವೆ. ದೇಶದ ರೈತರು ಹಾಗೂ ಬಡವರು ಹಾಗೆಯೇ ಉಳಿದುಕೊಂಡಿದ್ದಾರೆ. ರೈತರ ಬದುಕು ಹರಿದ ಗೋಣಿ ಚೀಲವಾಗಿದೆ, ಇನ್ನಾದರೂ ರೈತ ಸಂಘವು ಒಂದು ರಾಜಕೀಯ ಶಕ್ತಿಯಾಗಿ ಬೆಳೆಸುವಂತೆ ಸಲಹೆ ನೀಡಿದರು.
ಇದಕ್ಕೂ ಮುನ್ನ ಗಂಗಣ್ಣ ಎಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಎಸ್ ಎಸ್ ಬ್ಯಾಂಕ್ ಅಧ್ಯಕ್ಷ ಚಿಕ್ಕಪ್ಪ ಛತ್ರದ, ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮಹ್ಮದ ಗೌಸ್, ಎ.ಎ. ಮುಲ್ಲಾ, ಮಾಲತೇಶ ಪೂಜಾರ, ಶಿವಬಸಪ್ಪ ಗೋವಿ, ಜಾನ್ ಪುನೀತ್ ಸ್ವಾಗತಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ನಿರೂಪಿಸಿದರು. ತಾಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ವಂದಿಸಿದರು.