, ಕೀರ್ತನೆಗಳನ್ನು ಹಾಡುವುದರಿಂದ ಮಾತ್ರ ಕನಕದಾಸರ ಆಶಯ ಈಡೇರುವುದಿಲ್ಲ. ಅವರ ಸಾಹಿತ್ಯವನ್ನು ಓದಿ, ಅದರಲ್ಲಿರುವ ಸಾಮಾಜಿಕ ಸಂದೇಶವನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಬೇಕು.
ಹಳಿಯಾಳ: ಕನಕದಾಸರ ಸಂದೇಶವನ್ನು ಕೇವಲ ಭಕ್ತಿಯ ಪರಿಧಿಯಲ್ಲಿ ಸೀಮಿತಗೊಳಿಸದೆ, ಸಮಾನತೆ, ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ವೈಚಾರಿಕ ಪ್ರಜ್ಞೆಯ ವಿಶಾಲ ನೆಲೆಯಲ್ಲಿ ಅರ್ಥೈಸಿಕೊಳ್ಳುವ ಮೂಲಕ, ಜಾತಿ ಭೇದಗಳಿಲ್ಲದ, ಮನುಷ್ಯ ಮನುಷ್ಯನನ್ನು ಗೌರವಿಸುವಂತಹ ಸುಂದರ ಸಮಾಜವನ್ನು ನಿರ್ಮಿಸೋಣ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್ ಪ್ರಸನ್ನ ಹೇಳಿದರು.
ಶುಕ್ರವಾರ ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ್ದ ಭಕ್ತಶ್ರೇಷ್ಠ ಕನಕದಾಸರ 539ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೀರ್ತನೆಗಳನ್ನು ಹಾಡುವುದರಿಂದ ಮಾತ್ರ ಅವರ ಆಶಯ ಈಡೇರುವುದಿಲ್ಲ. ಅವರ ಸಾಹಿತ್ಯವನ್ನು ಓದಿ, ಅದರಲ್ಲಿರುವ ಸಾಮಾಜಿಕ ಸಂದೇಶವನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದರು.ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಕಟ್ಟಿ ಮಾತನಾಡಿ, ಇಂದಿನ ಹಾಗೂ ಭವಿಷ್ಯದ ಪೀಳಿಗೆಗೆ ದಾರ್ಶನಿಕರು ಮತ್ತು ಶ್ರೇಷ್ಠ ಸಂತರ ಪರಿಚಯ ಮಾಡಿಸಲು ಸರ್ಕಾರ ನಡೆಸುತ್ತಿರುವ ಜಯಂತ್ಯುತ್ಸವದ ಕ್ರಮ ಸೂಕ್ತವಾಗಿದೆ ಎಂದರು.
ಕನಕದಾಸರ ವೈಚಾರಿಕ ಸಂದೇಶ: ಉಪನ್ಯಾಸಕ ಶಾಂತಾರಾಮ ಚಿಬುಲಕರ ಅವರು ಉಪನ್ಯಾಸ ನೀಡಿ, ಕನಕದಾಸರನ್ನು ಕೇವಲ ಕೀರ್ತನೆಗಳ ರಚನೆಕಾರರಾಗಿ ಕಾಣಬಾರದು. ಅವರ ಕೀರ್ತನೆಗಳಲ್ಲಿ ಅಡಗಿರುವ ಮಾನವನ ಒಳಜಗತ್ತು, ಸಮಾಜದ ಅಸಮಾನತೆ, ನೈತಿಕತೆ ಮತ್ತು ಬದುಕಿನ ಸತ್ಯವನ್ನು ಅರಿಯಬೇಕು ಎಂದರು.ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ 2025- 26ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಶಾಂತಾರಾಮ ಚಿಬುಲಕರ ಮತ್ತು ಉತ್ತರ ಕನ್ನಡ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಪ್ಪ ಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ಪ್ರಮುಖರಾದ ಎಂ.ಎಚ್. ಹುರಕಡ್ಡಿ, ತಾಲೂಕು ಅಧ್ಯಕ್ಷ ಪರಶುರಾಮ ಹರ್ಲಿ, ತಾಲೂಕು ಉಪಾಧ್ಯಕ್ಷ ನಾಗೇಂದ್ರ ಕುರುಬೂರು, ಬಿಸಿಎಂ ನಿವೃತ್ತ ಅಧಿಕಾರಿ ಕುರುಬೂ ಸಮಾಜದ ನಿಂಗಪ್ಪ ಹಿಟ್ಟಣಗಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ಶಿರಸ್ತೇದಾರ ಹನುಮಂತ ಪರೋಡಕರ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ್ ಹಾಗೂ ಇತರರು ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ಪರಶುರಾಮ ಶಿಂದೆ ಮತ್ತು ಮಂಜುನಾಥ ಹಡಗಲಿ ಅವರು ಕಾರ್ಯಕ್ರಮ ನಿರ್ವಹಿಸಿದರು.ಭವ್ಯ ಶೋಭಾಯಾತ್ರೆ: ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮೈಲಾರಲಿಂಗ ದೇವಸ್ಥಾನದಿಂದ ತಾಲೂಕಾಡಳಿತ ಸೌಧದವರೆಗೆ ಕನಕದಾಸರ ಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಕುರುಬ ಸಮಾಜದ ಹಿರಿಯರು, ಮಹಿಳೆಯರು, ಮಕ್ಕಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಿವಪುರ ಗ್ರಾಮದ ಡೊಳ್ಳು ವಾದ್ಯಗಳ ಸಂಗೀತಕ್ಕೆ ಹಳದಿ ಭಂಡಾರವನ್ನು ಎರಚುತ್ತಾ ಜನರು ಸಂಭ್ರಮಿಸಿದರು.