ಸಾರಾಂಶ
ಬ್ಯಾಡಗಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ದೇಶದಲ್ಲಿ ನರೇಂದ್ರ ಮೋದಿ ಅಲೆ ಇಲ್ಲವೆಂಬುದನ್ನು ಹಾವೇರಿಯಿಂದಲೇ ಪರಿಚಯಿಸೋಣ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಪಟ್ಟಣದ ಸಂಗಮೇಶ್ವರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಆಯೋಜನೆ ಮಾಡಲಾಗಿದ್ದ ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಮನ್ನಣೆ ನೀಡಲಿದ್ದಾರೆ. ಸರ್ವ ಸಮಾಜದ ಏಳಿಗೆ ಬಯಸುವ ಯಾವುದಾದರೂ ಪಕ್ಷ ದೇಶದಲ್ಲಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ, ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಸಮಾಜದ ಜನರು ಕಾಂಗ್ರೆಸ್ ಕೈಹಿಡಿಯುವಂತೆ ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಮಹಿಳೆಯರನ್ನು ಸಬಲರನ್ನಾಗಿಸಿದ್ದೇವೆ, ಹಸಿದವರಿಗೆ ಅನ್ನ ನೀಡಿದ್ದೇವೆ, ಯುವಕರ ಜೀವನಕ್ಕೆ ದಾರಿ ತೋರಿಸಿದ್ದೇವೆ, ಇಂತಹ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗೋದಾಮಿನಲ್ಲಿ ಕೊಳೆಯುತ್ತಿದ್ದರೂ ಕೇಂದ್ರ ಸರ್ಕಾರ ಅಕ್ಕಿ ನೀಡದೆ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದರು.ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ ಮಾತನಾಡಿ, ಸದಾ ಕಾಂಗ್ರೆಸ್ ಟೀಕೆ ಮಾಡುವ ಭಾರದಲ್ಲಿ ಬಿಜೆಪಿ ನಾಯಕರು ತಾವು ಶಿಕ್ಷಣ ಪಡೆದಿದ್ದ ಕಾಂಗ್ರೆಸ್ ನಿರ್ಮಿಸಿದ ಶಾಲೆ ಕಾಲೇಜುಗಳಲ್ಲಿ ಎಂಬುದನ್ನು ಮರೆತಿದ್ದಾರೆ, ಅಂದು ದೇಶ ಅಳುತ್ತಿದ್ದ ಬ್ರಿಟಿಷರನ್ನು ಹೊಡೆದೋಡಿಸಿದ ರೀತಿಯಲ್ಲಿ ದೇಶವನ್ನು ಹಾಳು ಮಾಡುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕಿದೆ ಎಂದರು.
ಸುರೇಶ ಯಮನಕ್ಕನವರ ಮಾತನಾಡಿದರು.ಸಭೆಯಲ್ಲಿ ನಾಗರಾಜ್ ಅನ್ವೇರಿ, ಸುರೇಶ ಹುಳಬುತ್ತಿ, ಅಬ್ದುಲ್ ಮುನಾಫ್ ಯಲಿಗಾರ, ನ್ಯಾಯವಾದಿ ಶಿವಪ್ಪ ಅಂಬಲಿ ಶಂಭನಗೌಡ ಪಾಟೀಲ, ಚನಬಸಪ್ಪ ಹುಲ್ಲತ್ತಿ, ಬೀರಪ್ಪ ಬಣಕಾರ, ಹೊನ್ನೂರಪ್ಪ ಕಾಡಸಲಿ, ರಮೇಶ್ ಕೋಟಿ, ಪ್ರಕಾಶ ಬಣಕಾರ, ದುರ್ಗೇಶ ಗೋಣೆಮ್ಮನವರ, ಗಿರೀಶ ಇಂಡಿಮಠ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.