ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ತಿಳಿಸಲಿ : ಎಚ್.ಡಿ.ದೇವೆಗೌಡ ಸವಾಲು

| Published : Apr 23 2024, 12:45 AM IST

ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ತಿಳಿಸಲಿ : ಎಚ್.ಡಿ.ದೇವೆಗೌಡ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಭಿನ್ನ ಹೇಳಿಕೆಗಳನ್ನು ನೀಡುತ್ತಿವೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೇಕೆದಾಟು ಯೋಜನೆಗೆ ಅವಕಾಶ ನೀಡುವುದೇ ಇಲ್ಲ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಡಿ ಎಂದು ಭಾಷಣ ಮಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ತಿಳಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಸವಾಲು ಹಾಕಿದರು.

ಬೀರೂರಿನ ಕೆ.ಎಲ್.ಕೆ.ಕಾಲೇಜು ಮೈದಾನದಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಚುನಾವಣಾ ಪ್ರಚಾರ

ಕನ್ನಡಪ್ರಭ ವಾರ್ತೆ, ಬೀರೂರು

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಭಿನ್ನ ಹೇಳಿಕೆಗಳನ್ನು ನೀಡುತ್ತಿವೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೇಕೆದಾಟು ಯೋಜನೆಗೆ ಅವಕಾಶ ನೀಡುವುದೇ ಇಲ್ಲ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಡಿ ಎಂದು ಭಾಷಣ ಮಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ತಿಳಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಸವಾಲು ಹಾಕಿದರು.

ಬೀರೂರಿನ ಕೆ.ಎಲ್.ಕೆ.ಕಾಲೇಜು ಮೈದಾನದಲ್ಲಿ ಸೋಮವಾರ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ರಾಜ್ಯದ ಒಂಬತ್ತು ಜಿಲ್ಲೆಗಳ 29 ತಾಲೂಕುಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ಎಂದು ನೋಡಿಲ್ಲ ಎಂದರು.

ರಾಜ್ಯದಲ್ಲಿ ನೀರಾವರಿ ಯೋಜನೆಗಳು ಸ್ಥಗಿತವಾಗಿವೆ. ರಸ್ತೆ ಕಾಮಗಾರಿಗಳು ನಡೆಯುತ್ತಿಲ್ಲ. ಅಭಿವೃದ್ಧಿ ಕೆಲಸಗಳು ಮರೀಚಿಕೆ ಯಾಗಿದೆ ಎಂದು ಗಂಬೀರ ಆರೋಪ ಮಾಡಿದರು.

ಎತ್ತಿನಹೊಳೆ ಯೋಜನೆಯಲ್ಲಿ ಏನೇನು ಅಕ್ರಮ ನಡೆದಿದೆ ಎಂದು ಪ್ರಸ್ತಾಪಿಸಲು ಹೋಗುವುದಿಲ್ಲ. ಎಂಟು ಸಾವಿರ ಕೋಟಿ ಯೋಜನೆ ಇಂದು 21ಸಾವಿರ ಕೋಟಿಗೆ ಏರಿಕೆಯಾಗಿದೆ. ದುರ್ದೈವ ಎಂದರೆ ಕೋಲಾರ, ಚಿಕ್ಕಬಳ್ಳಾಪುರ, ಮುಂತಾದೆಡೆ ಈ ಯೋಜನೆ ನೀರು ಸಿಗುವುದಿಲ್ಲ ಎಂದರು.

ರಾಜ್ಯದ ಸವಲತ್ತನ್ನು ಲೂಟಿ ಮಾಡಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಛತ್ತೀಸ್ ಘಡ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳ ಚುನಾವಣೆಗಳಿಗೆ ಬಳಸುತ್ತಿದೆ. 10 ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೋದಿ ಅವರ ಬಗ್ಗೆ ಸರ್ಕಾರದ ಮುಖಂಡರು ಲಘುವಾಗಿ ಮಾತನಾಡುತ್ತಾರೆ. ಇದನ್ನು ಬೇರು ಸಮೇತ ಕಿತ್ತೋಗೆಯಬೇಕು ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ತಾವು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಯೋಜನೆ ನಿಂತು ಹೋಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ 6ಸಾವಿರ ಕೇಂದ್ರ ಸರ್ಕಾರ ನೀಡಿದರೆ. 4ಸಾವಿರ ರಾಜ್ಯ ಸರ್ಕಾರ ನೀಡಬೇಕು. ಅದಕ್ಕೂ ಈ ಸರ್ಕಾರ ಎಳ್ಳು-ನೀರು ಬಿಟ್ಟಿದೆ. ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿರುವ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಯಾವುದೇ ಯೋಜನೆಗಳು ಮತ್ತು ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ನೆಪದಲ್ಲಿ ಜನರ ಹಗಲು ದರೋಡೆಯಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕಡೂರು ಕ್ಷೇತ್ರದ ಜನ ಭೀಮನ ಬಲ ಮತ್ತು ಬುದ್ದಿಯ ಶಕ್ತಿ ಎರಡನ್ನು ಪಡೆದು ಧನ್ಯರಾಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಅವರು ಎನ್.ಡಿ.ಎ ಅಭ್ಯರ್ಥಿಯನ್ನು ನೂರಕ್ಕೆ ನೂರು ಬೆಂಬಲಿಸುತ್ತಾರೆಂದು ತಿಳಿಸಿದರು.

ಭೀಮನ ಬಲ ಬೆಳ್ಳಿಪ್ರಕಾಶ್ ಅವರಿಂದ ಸಿಕ್ಕರೆ ಬುದ್ಧಿಯ ಬಲ ವೈ.ಎಸ್.ವಿ ದತ್ತಾ ಅವರಿಂದ ಸಿಗುತ್ತಿದೆ. ಈ ಎರಡು ಶಕ್ತಿಗಳು ಒಂದಾದರೇ ಎದುರಾಳಿಗಳು ತರಗೆಲೆಯಂತೆ ಉರುಳಿ ಹೋಗುವುದು ಸತ್ಯ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಎನ್ನುವ ಎರೆಹುಳು ಸಿಗಿಸಿ ನಿಮ್ಮ ಮತಕ್ಕೆ ಗಾಳ ಹಾಕುತ್ತಾ, ದೇಶವನ್ನು ಬಲಿಕೊಡುವ ಕೆಟ್ಟ ರಾಜಕಾರಣ ಮಾಡುತ್ತಿದೆ. ನಿಮಗೆ ರಾಮ ರಾಜ್ಯ ಬೇಕೋ? ಅಥವಾ ತಾಲಿಬಾನ್ ಆಡಳಿತ ಬೇಕೋ ನೀವೇ ತೀರ್ಮಾನಿಸಬೇಕು. ಕಾಂಗ್ರೆಸ್ ನವರಿಗೆ ಭಾರತ ಮಾತೆಗೆ ಜೈ ಎನ್ನಲು ಹಿರಿಯ ನಾಯಕರ ಅನುಮತಿ ಪಡೆಯುವ ಪರಿಸ್ಥಿತಿ ಇದೆ. ತಾಲಿಬಾನ್ ಆಡಳಿತ ಕೊನೆಯಾಗಬೇಕಾದ್ರೇ ನೀವು ಮೋದಿ ಕೈ ಬಲಪಡಿಸಿ ಕೇಂದ್ರದಲ್ಲಿ ಬೆಜೆಪಿಯನ್ನು ಆಡಳಿತಕ್ಕೆ ತರಬೇಕು ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅಬಕಾರಿ ಮದ್ಯ ಬೆಲೆ ಏರಿಕೆ ಮಾಡಿ ಗಂಡಸರ ಬಳಿ ಹಣ ಕಿತ್ತು ಗ್ಯಾರಂಟಿ ಹೆಸರಿನಲ್ಲಿ ಅವರ ಪತ್ನಿಯರಿಗೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದ ಅವರು ಪಿಕ್ ಪ್ಯಾಕೆಟ್ ಕೆಲಸ ಗೊತ್ತಿರುವುದು ಕಾಂಗ್ರೆಸ್ ಗೆ ಮಾತ್ರ ಎಂದರು. ವಿದ್ಯುತ್ ದರ ಏರಿಕೆ, ಬಾಂಡ್ ಪೇಪರ್ ಬೆಲೆ ಏರಿಕೆ, ರೈತರ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಇದು ನಿಲ್ಲಬೇಕು ಎಂದು ಒತ್ತಾಹಿಸಿದರು.

ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಕಳೆದ 10 ವರ್ಷದ ಆಡಳಿತದಲ್ಲಿ ಪ್ರಧಾನಿ ಮೋದಿಯವರು ನೂರಾರು ಯೋಜನೆಗಳನ್ನು ಈ ದೇಶದ 140ಕೋಟಿ ಜನಸಂಖ್ಯೆಗೆ ಯಾವುದೇ ಜಾತಿ ಬೇಧ ಭಾವವಿಲ್ಲದೆ ನೀಡಿ ದೇಶದ ಸುಭದ್ರತೆ, ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಇವರನ್ನು ಮತದಾರರು 2024ಕ್ಕೆ ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದರು.

ವೇದಿಕೆಯಲ್ಲಿ ವೈ.ಎಸ್.ವಿ.ದತ್ತ, ಬಿಜೆಪಿ ಜಿಲ್ಲಾ ವಕ್ತಾ ಮಹೇಶ್ ಒಡೆಯರ್, ಮಂಡಲ ಅಧ್ಯಕ್ಷ ದೇವಾನಂದ್, ಜೆ.ಡಿ.ಎಸ್ ತಾಕೂಕು ಅಧ್ಯಕ್ಷ ಮಹೇಶ್ ಮಾಜಿ ಜಿಪಂ ಸದಸ್ಯ ಬಿ.ಪಿ.ನಾಗರಾಜ್, ಕೆ.ಎಂ.ವಿನಾಯಕ್, ಕಲ್ಮರುಡಪ್ಪ, ಸುನಿತಾ ಜಗದೀಶ್, ಸವಿತಾ ರಮೇಶ್, ಚೇತನ್ ಕೆಂಪರಾಜ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್ ಸದಸ್ಯರಾದ ಬಿ.ಆರ್. ಮೋಹನ್ ಕುಮಾರ್, ರಾಜು, ನಾಗರಾಜ್, ಬಾವಿಮನೆ ಮಧು, ಜಿಗಣೇಹಳ್ಳಿ ನೀಲಕಂಠಪ್ಪ,ಮಾರ್ಗದ ಮಧು, ಹೇಮಂತ್ ಕುಮಾರ್, ಸೇರಿದಂತೆ ಸಾವಿರಾರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಇದ್ದರು.

-- ಬಾಕ್ಸ್---

ಮಾಜಿ ಪ್ರಧಾನಿ ದೇವೆಗೌಡರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಿ.ಟಿ.ರವಿ ಮತ್ತು ಬೆಳ್ಳಿಪ್ರಕಾಶ್ ಅವರು ಭಾಷಣ ಮಾಡುವಾಗ ಸಭೀಕರಿಂದ ನೂರಾರು ಬಾರಿ ಕರತಾಡನ ಮತ್ತು ಶಿಳ್ಳೆ ಮೊಳಗಿದವು. ಕೇಸರಿ ಶಾಲನ್ನು ಕೈಯಲ್ಲಿ ಹಿಡಿದು ತಿರುಗಿಸಿದ ಸನ್ನಿವೇಶವು ಕಂಡು ಬಂತು.

22 ಬೀರೂರು 1

ಬೀರೂರಿನ ಕೆ.ಎಲ್.ಕೆ.ಕಾಲೇಜು ಮೈದಾನದಲ್ಲಿ ಸೋಮವಾರ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ನವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ವೈ.ಎಸ್.ವಿ.ದತ್ತ ಇದ್ದರು.