ಸಾರಾಂಶ
ಸರ್ಕಾರದ ಆದೇಶದ ಕಾರಣದಿಂದ ಕಾಲೇಜುಗಳಲ್ಲಿ ಉರ್ದು ಮಾಧ್ಯಮದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಆದ್ದರಿಂದ ಈ ಕುರಿತು ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿ ಕೆಲವು ಜನಪ್ರತಿನಿಧಿಗಳಿಗೆ ಮನವಿ ಸಹ ಸಲ್ಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಇತ್ತೀಚಿನ ಸರ್ಕಾರಿ ಆದೇಶದಂತೆ ಕಾಲೇಜುಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಉರ್ದು ಭಾಷೆಯಲ್ಲಿ ಓದು ಅವಕಾಶ ನೀಡಿಲ್ಲ. ಇದು ಉರ್ದು ವಿದ್ಯಾರ್ಥಿಗಳಿಗೆ ಮಾಡಿರುವ ಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್ ಆಕ್ರೋಶ ಹೊರಹಾಕಿದರು.ಈ ಕುರಿತು ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಉರ್ದು ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವ ಆಸಕ್ತಿ ಹೊಂದಿರುವ ಮುಸ್ಲಿಂ ಸಮುದಾಯದ ಮಕ್ಕಳಿಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಉರ್ದು ಭಾಷೆಯನ್ನು ಕಲಿಯಲು 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುವ ಅವಕಾಶ ನೀಡಿಲ್ಲ. ಇದರಿಂದ ಉರ್ದು ಭಾಷೆ ಓದುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕಳೆದ 2 ತಿಂಗಳ ಹಿಂದೆಯೇ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಯಲ್ಲಿ ಪ್ರಥಮ ಭಾಷೆಯನ್ನಾಗಿ ಉರ್ದು ವ್ಯಾಸಂಗ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು ಎಂದರು.
ಕೆಡಿಪಿ ಸದಸ್ಯ ರಿಯಾಜ್ ಪಾಷಾ ಮಾತನಾಡಿ, ಸರ್ಕಾರದ ಆದೇಶದ ಕಾರಣದಿಂದ ಕಾಲೇಜುಗಳಲ್ಲಿ ಉರ್ದು ಮಾಧ್ಯಮದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಆದ್ದರಿಂದ ಈ ಕುರಿತು ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿ ಕೆಲವು ಜನಪ್ರತಿನಿಧಿಗಳಿಗೆ ಮನವಿ ಸಹ ಸಲ್ಲಿಸಲಾಗಿದೆ. ಆದರೂ ಈ ಸಂಬಂಧ ಯಾವುದೇ ಆದೇಶ ಬಂದಿಲ್ಲ. ಆದ್ದರಿಂದ ಈ ಪತ್ರಿಕಾಗೊಷ್ಠಿಯ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಮುಸ್ಲಿಂ ಸಮುದಾಯದ ಸಚಿವರು ಹಾಗೂ ಶಾಸಕರು ಇದರ ಬಗ್ಗೆ ಧ್ವನಿ ಎತ್ತಿ ನಮ್ಮ ಭಾಷೆಯ ಉಳಿವಿಗಾಗಿ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಅನುಮತಿ ಕೊಡಿಸಬೇಕು . ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.