ಸಾರಾಂಶ
ನಮ್ಮ ಜೀವಿತಾವಧಿಯಲ್ಲಿ ದೊರಕಿದ ಒಳ್ಳೆಯ ಕೆಲಸ ಕಾರ್ಯಗಳಿಗೆ ಬಳಸಬೇಕು
ಸಿದ್ದಾಪುರ: ನಮ್ಮ ಜೀವಿತಾವಧಿಯಲ್ಲಿ ದೊರಕಿದ ಸಮಯವನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬೇಕು ಎಂದು ಮಾಧವಾನಂದ ಭಾರತೀ ಶ್ರೀ ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ನಾಲ್ಕನೇ ಚಾತುರ್ಮಾಸ್ಯ ಆಚರಿಸುತ್ತಿರುವ ಶ್ರೀಗಳು ಹೊನ್ನಾವರ ತಾಲೂಕಿನ ಹಡಿನಬಾಳು ಗ್ರಾಮದ ಭಕ್ತರಿಂದ ಸಂಪೂರ್ಣ ಸೇವೆಯನ್ನು ಸ್ವೀಕರಿಸಿ ಮಾತನಾಡಿದರು.ಒಳ್ಳೆಯ ಕೆಲಸಗಳನ್ನು ಮಾಡಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು. ಭಗವಂತನಿಂದ ದೊರಕಿದ ಈ ಮನುಷ್ಯ ಜನ್ಮದಲ್ಲಿ ಸಮಯವನ್ನು ವ್ಯರ್ಥ ಮಾಡದೇ ಸತ್ಯವಾದ ಮಾರ್ಗದಲ್ಲಿ ಜೀವನವನ್ನು ನಡೆಸಬೇಕು ಮತ್ತು ಪರೋಪಕಾರದಿಂದ ಕೂಡಿದ ಜೀವನದ ದಾರಿ ನಮ್ಮದಾಗಿರಬೇಕು ಎಂದರು.
ಹಗಲು ಮತ್ತು ರಾತ್ರಿಗಳಂತೆ ನಮ್ಮ ಜೀವನವೂ ಸಹ ಕಳೆದು ಹೋಗುತ್ತದೆ. ಸಮಯವು ಕಡೆದ ನಂತರ ಚಿಂತಿಸಿದರೆ ಫಲ ದೊರಕುವುದಿಲ್ಲ. ಮೊದಲೇ ಯೋಚಿಸಿ ದೃಢ ನಿರ್ಧಾರದಿಂದ ಸರಿಯಾದ ಮಾರ್ಗದಲ್ಲಿ ಸಾಗಬೇಕು. ಹಾಗಾಗಿ ನಾವು ಹೆಚ್ಚು ಸಮಯವನ್ನು ಧರ್ಮದ ಆಚರಣೆಯಲ್ಲಿ ಕಳೆಯಬೇಕು. ನಾವು ಹಿಂದೆ ಮಾಡಿದ ಪಾಪ ಪುಣ್ಯದ ಕೆಲಸಗಳಿಗೆ ಸರಿಯಾಗಿ ಸುಖ ಮತ್ತು ದುಃಖಗಳು ಬರುತ್ತವೆ. ಇಂತಹ ಸಂದರ್ಭಗಳಲ್ಲಿ ಸಮಚಿತ್ತದಿಂದ ಕೂಡಿದವನಾಗಿ ಸಂಸಾರವೆಂಬ ಸಾಗರವನ್ನು ದಾಟಬೇಕು. ಭೌತಿಕ ವಸ್ತುಗಳ ಸಂಪಾದನೆಯಲ್ಲಿ ಹೆಚ್ಚುಮನಸ್ಸನ್ನು ಇಡದೆ ಪಾರಮಾರ್ಥಿಕ ಜೀವನವನ್ನು ನಡೆಸಬೇಕು. ಕೊನೆಯಲ್ಲಿ ನಮ್ಮ ಜೊತೆಯಲ್ಲಿ ಬರುವದು ಸತ್ಯ ಮತ್ತು ಧರ್ಮಗಳು ಮಾತ್ರ ಎಂದು ಆಶೀರ್ವದಿಸಿ ಎಲ್ಲ ಭಕ್ತರಿಗೆ ಮಂತ್ರಾಕ್ಷತೆ ನೀಡಿದರು.ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ಗನೂರು ಮತ್ತು ಎಸ್.ಎನ್. ಹೆಗಡೆ ಹಡಿನಬಾಳು, ರಘುಪತಿ ಹೆಗಡೆ, ಹಾಲೆ ಗೌರಿ, ವಿನಾಯಕ ಭಟ್ಟ, ನೆಲೆಮಾವು ಗ್ರಾಮ ಪ್ರತಿನಿಧಿಗಳು, ಭಕ್ತರು ಉಪಸ್ಥಿತರಿದ್ದರು.
ಸಿದ್ದಾಪುರ ತಾಲೂಕಿನ ಮಾಧವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು.