ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಜಾತಿ, ಧರ್ಮ ಮತ್ತು ಹಣದ ಬಲದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ಸಂವಿಧಾನವನ್ನು ಒಪ್ಪುತ್ತೇವೆ ಅಥವಾ ಇಲ್ಲ ಅನ್ನೋದನ್ನು ಸಾರ್ವಜನಿಕವಾಗಿ ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಕ್ಕಾಗಿ ಸುಳ್ಳು ಹೇಳುವ ಬಿಜೆಪಿಯವರಿಗೆ ಇದೀಗ ಸಂವಿಧಾನವೇ ಸುಪ್ರೀಂ ಅನ್ನೋದು ಅರಿವಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಪ್ರತಿಗೆ ನಮಸ್ಕರಿಸುವ ಹಂತಕ್ಕೆ ಬಂದಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಈ ಬಾರಿ ಪ್ರಧಾನಿ ಕುರ್ಚಿಯ ನಾಲ್ಕೂ ಕಾಲುಗಳೂ ಬೇರೆಯವರ ಕೈಯಲ್ಲಿದೆ. ಚುನಾವಣೆ ಫಲಿತಾಂಶದ ಪರಿಣಾಮ ನರೇಂದ್ರ ಮೋದಿಯವರ ಹೇಳಿಕೆ ಮತ್ತು ವರ್ತನೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದ್ದು ಸಂವಿಧಾನ ಪ್ರತಿಗೆ ನಮಸ್ಕರಿಸುವ ಮನಃಸ್ಥಿತಿಗೆ ಪ್ರಸ್ತುತ ಅವರ ಅಸಹಾಯಕತೆಯೇ ಕಾರಣ ಎಂದು ಆರೋಪಿಸಿದರು.ಸಂವಿಧಾನ ಪ್ರತಿಯನ್ನೇ ಸುಟ್ಟ ಬಿಜೆಪಿಯವರು ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾಯಿಸಲು ಹೇಳಿಕೊಳ್ಳುತ್ತಿದ್ದರು. ದೇಶದಲ್ಲಿ ಜಾತಿ ಮತ್ತು ಒಕ್ಕೂಟ ವ್ಯವಸ್ಥೆ ಇರಬೇಕೇ ಬೇಡವೇ ಎಂಬುದು ಬಿಜೆಪಿ ಈಗಲಾದರೂ ಸ್ಪಷ್ಟಪಡಿಸಬೇಕು ಎಂದೂ ಒತ್ತಾಯಿಸಿದರು.ಬಿಜೆಪಿ ಸಿದ್ಧಾಂತದ ವಿರುದ್ಧ ನಮ್ಮ ವಿರೋಧವಿದೆಯೇ ಹೊರತು ಆ ಪಕ್ಷದ ಯಾವುದೇ ಮುಖಂಡರ ವಿರುದ್ಧವೂ ಅಲ್ಲ. ಆ ಪಕ್ಷದ ಸಿದ್ಧಾಂತವನ್ನು ಸೋಲಿಸಲು ಆಗದಿರುವ ಬಗ್ಗೆ ನೋವಿದೆ. ನಮಗೆ ನಿರೀಕ್ಷಿತ ಸ್ಥಾನಗಳು ಬಾರದಿರುವುದಕ್ಕೆ ನಮ್ಮ ಪಕ್ಷದ ಸಿದ್ಧಾಂತ ಅಥವಾ ಮುಖಂಡರ ವೈಫಲ್ಯವೂ ಕಾರಣವಲ್ಲ. ಹಿಂದುತ್ವ ಮತ್ತು ಹಣ ಬಲ ಇಲ್ಲವಾಗಿದ್ದರೆ ಈ ಬಾರಿ ಬಿಜೆಪಿಗೆ 240 ಸ್ಥಾನ ಕೂಡ ಬರುತ್ತಿರಲಿಲ್ಲ. ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗ್ತಿರೋದು ಮಿತ್ರ ಪಕ್ಷಗಳ ಬೆಂಬಲದಿಂದಲೇ ಹೊರತು ಸ್ವಂತ ಬಲದಿಂದ ಅಲ್ಲ. ಕಾಂಗ್ರೆಸ್ ಸ್ವಂತ ಬಲದಲ್ಲೇ ಪ್ರಧಾನಿಯಾಗುತ್ತಿದ್ದ ನೆಹರೂರವರ ಮಟ್ಟಕ್ಕೆ ಮೋದಿಯವರ ಹೋಲಿಕೆ ಮಾಡ್ತಿರೋದು ಹಾಸ್ಯಾಸ್ಪದ ಎಂದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಆರಗ ಜ್ಞಾನೇಂದ್ರ ಶಾಸಕರಿಗೆ ಸಿಗುವ 20,800 ರು. ಹಣದಲ್ಲೇ ಜೀವನ ಸಾಗಿಸುತ್ತಾರೆಯೇ ಎಂಬುದು ಸ್ಪಷ್ಟಪಡಿಸಬೇಕು. ಈ ಬಗ್ಗೆ ಅವರೊಂದಿಗೆ ಬಹಿರಂಗ ಚರ್ಚೆಗೆ ನಾನು ಯಾವುದೇ ಸ್ಥಳದಲ್ಲಿ ಸಿದ್ಧನಿದ್ದೇನೆ ಎಂದೂ ಶಾಸಕರಿಗೆ ಸವಾಲು ಹಾಕಿದರು.ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಮುಡುಬಾ ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪ್ರಮುಖರಾದ ಡಿ.ಎಸ್.ವಿಶ್ವನಾಥ ಶೆಟ್ಟಿ, ಗೀತಾ ರಮೇಶ್, ರಹಮತ್ ಉಲ್ಲಾ ಅಸಾದಿ, ಸುಶೀಲಾ ಶೆಟ್ಟಿ, ಶಬನಂ, ಮಂಜುಳಾ ನಾಗೇಂದ್ರ, ವಿಲಿಯಂ ಮಾರ್ಟಿಸ್ ಇದ್ದರು. ಹಣ, ಹೆಂಡದ ಬಲದಿಂದ ಬಿಜೆಪಿ ಗೆದ್ದಿದೆ
ನೈಋತ್ಯ ಪದವೀಧರ ಕ್ಷೇತ್ರವನ್ನೂ ಕೂಡಾ ಬಿಜೆಪಿ ಹಣ, ಹೆಂಡದ ಬಲದಿಂದಲೇ ಗೆದ್ದಿರೋದು. ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರರ ಬಂಡೆ, ಮರಳು ಮಾಫಿಯಾದ ಹಿಂಬಾಲಕರು ಮತದಾರರಿಗೆ ಮಲ್ನಾಡ್ ಕ್ಲಬ್ಬಿನಲ್ಲಿ ಗುಂಡು ತುಂಡು ವ್ಯವಸ್ಥೆ ಮಾಡಿದ್ದಲ್ಲದೇ ಚುನಾವಣೆ ದಿನ ಮತದಾನ ಕೇಂದ್ರದಲ್ಲೇ ಹಣ ಹಂಚಿದ್ದಾರೆ. ಜಾಗೃತ ಮತದಾರರೆನಿಸಿಕೊಂಡವರೂ ಹಣ ಮತ್ತು ಹೆಂಡಕ್ಕೆ ಮಾರಿಕೊಂಡಿರುವುದು ವಿಷಾದನೀಯ.ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ವಕ್ತಾರ