ಬಲ್ಡೋಟ ಕಾರ್ಖಾನೆ ಸ್ಥಾಪನೆ, ವಿಸ್ತರಣೆ ಹಾಗೂ ಮಾಲಿನ್ಯ ವಿರೋಧಿಸಿ ಅ. 31ರಂದು ಹೋರಾಟದ ವೇದಿಕೆ ಕರೆ ನೀಡಿರುವ 48 ಗಂಟೆಗಳ ಕೊಪ್ಪಳ–ಭಾಗ್ಯನಗರ ಬಂದ್ ಹೋರಾಟದಲ್ಲಿ ಯುವಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಭಾಗ್ಯನಗರದ ದಾನಪ್ಪ ಕವಲೂರು ಕರೆ ನೀಡಿದರು.
ಕೊಪ್ಪಳ: ಬಲ್ಡೋಟ ಕಾರ್ಖಾನೆ ಸ್ಥಾಪನೆ, ವಿಸ್ತರಣೆ ಹಾಗೂ ಮಾಲಿನ್ಯ ವಿರೋಧಿಸಿ ಅ. 31ರಂದು ಹೋರಾಟದ ವೇದಿಕೆ ಕರೆ ನೀಡಿರುವ 48 ಗಂಟೆಗಳ ಕೊಪ್ಪಳ–ಭಾಗ್ಯನಗರ ಬಂದ್ ಹೋರಾಟದಲ್ಲಿ ಯುವಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಭಾಗ್ಯನಗರದ ದಾನಪ್ಪ ಕವಲೂರು ಕರೆ ನೀಡಿದರು.
ನಗರಸಭೆ ಆವರಣದಲ್ಲಿ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಬಂದ್ ಕುರಿತು ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರ ಉಳಿಸುವ ಉದ್ದೇಶದಿಂದ ನಡೆಯುತ್ತಿರುವ ಹೋರಾಟವನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಜೀವಂತವಾಗಿಟ್ಟಿರುವುದು ಶ್ಲಾಘನೀಯ. ಕಳೆದ ಒಂದು ವರ್ಷದಲ್ಲಿ ರಾಜ್ಯದ ವಿವಿಧೆಡೆಯ ಸ್ವಾಮೀಜಿಗಳು, ಪರಿಸರ ಹೋರಾಟಗಾರರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಧರಣಿಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಆದರೆ, ಧರಣಿ ಸ್ಥಳಕ್ಕೆ ಭೇಟಿ ನೀಡಿದ ರಾಜಕಾರಣಿಗಳು ಕಾಟಾಚಾರಕ್ಕೆ ಭರವಸೆ ನೀಡಿ ತೆರಳಿದ್ದಾರೆ. ರಾಜಕಾರಣಿಗಳ ಗಮನ ಸೆಳೆಯಲು ಯುವಕರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.ಜನಾಂದೋಲನ ರೂಪಿಸೋಣ: ಧರಣಿಯ 351ನೇ ದಿನದಂದು ಮಾತನಾಡಿದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಈಗಿರುವ ಎಂಎಸ್ಪಿಎಲ್ ಬಲ್ಡೋಟ ಪೆಲೆಟ್ ಘಟಕವೇ ನಗರದ ಶೇ. 40ರಷ್ಟು ಪ್ರದೇಶದಲ್ಲಿ ಮಾಲಿನ್ಯ ಉಂಟುಮಾಡುತ್ತಿದೆ ಎಂಬುದು ಹೋರಾಟಗಾರರ ಆರೋಪವಾಗಿದೆ. ಮುಂದಿನ ದಿನಗಳಲ್ಲಿ ₹54 ಸಾವಿರ ಕೋಟಿ ಬಂಡವಾಳ ಹೂಡಿಕೆಯಾದರೆ ಪರಿಸರದ ಮೇಲಾಗುವ ಪರಿಣಾಮವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾಹಿತಿಗಳು, ಪರಿಸರ ಹೋರಾಟಗಾರರು ಹಾಗೂ ಮಠಾಧೀಶರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ದೊಡ್ಡ ಮಟ್ಟದ ಜನಾಂದೋಲನ ರೂಪಿಸುವಂತೆ ಸಲಹೆ ನೀಡಿದ್ದಾರೆ. ಜನರ ಹಿತ ಕಾಪಾಡುವಲ್ಲಿ ವಿಫಲರಾಗುವ ರಾಜಕಾರಣಿಗಳ ವಿರುದ್ಧ ಧ್ವನಿ ಎತ್ತಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವ ಜನಪ್ರತಿನಿಧಿಗಳ ರಾಜೀನಾಮೆಗೆ ಆಗ್ರಹಿಸಬೇಕು ಎಂದು ಹೇಳಿದರು.ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಭಾವಿ, ಹನುಮಂತಪ್ಪ ಗೊಂದಿ, ಮಾಲಾ ಬಡಿಗೇರ, ವಿದ್ಯಾ ನಾಲವಾಡ, ಮಲ್ಲಪ್ಪ ಮಾದಿನೂರು, ಸಣ್ಣ ಹನುಮಂತಪ್ಪ ಬೊಮ್ಮಸಾಗರ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಬನಪ್ಪನವರ, ಗವಿಸಿದ್ದಪ್ಪ ಚಿಕೇನಕೊಪ್ಪ, ಶರಣಬಸಪ್ಪ ದಾನಕೈ, ಮಹೆಬೂಬಪಾಷಾ ಜಮಖಾನದಾರ, ರಂಗ ನಿರ್ದೇಶಕರಾದ ಲಕ್ಷ್ಮಣ ಪೀರಗಾರ್, ಶರಣು ಶೆಟ್ಟರ್ ಉಪಸ್ಥಿತರಿದ್ದರು.