ಪಂ. ಪುಟ್ಟರಾಜ ಗವಾಯಿಗಳಿಗೆ ಅವಾಗ ಗೊತ್ತಿದ್ದಿದ್ದು ಬರೀ ನಿರಂತರ ತಪಸ್ಸು. ಸಂಗೀತ ಆರಾಧನೆ, ಸಾಹಿತ್ಯ ರಚನೆ, ಲಿಂಗ ಪೂಜೆ, ಆಶ್ರಮದ ಮಕ್ಕಳನ್ನು ಎತ್ತರಕ್ಕೆ ಬೆಳೆಸುವುದು, ಅವರಿಗೆ ಅನ್ನ ಹಾಕುವುದಾಗಿತ್ತು. ಅವರು ಗೆದ್ದು ಹೋದರು.
ಗದಗ: ವೀರೇಶ್ವರ ಪುಣ್ಯಾಶ್ರಮ ಹಾನಗಲ್ಲ ಕುಮಾರೇಶ್ವರರ ಕನಸಿನ ಕೂಸು. ಈಗ ಇದು ಬಹಳಷ್ಟು ಎತ್ತರಕ್ಕೆ ಬೆಳೆದಿದೆ. ಅದು ಹಾಗೆ ಉಳಿಯಬೇಕು. ಅದರ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಹೋಗೋಣ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮಿಗಳು ತಿಳಿಸಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಉಭಯ ಶ್ರೀಗಳ ಜಾತ್ರಾ ಮಹೋತ್ಸವದಲ್ಲಿ ಕೀರ್ತನ ಸಮ್ಮೇಳನ ಹಾಗೂ ಅಂಧರಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಾಜ್ಯಾದ್ಯಂತ ಗೌರವಾನ್ವಿತ ಸ್ಥಾನಗಳು ವಿವಾದಕ್ಕೆ ಒಳಗಾಗುತ್ತಿವೆ. ಸತ್ಯವು ನಮಗೆ ಗೊತ್ತಿದೆ. ಆದರೆ, ಉತ್ತರಿಸುವ ಕಾಲವು ಇನ್ನೂ ಪಕ್ವವಾಗಿಲ್ಲ. ನಾವ್ಯಾರು ದುರ್ಬಲ ಸ್ವಾಮಿಗಳಲ್ಲ. ನಾವೆಲ್ಲರೂ ಪ್ರಬಲರಾಗಿದ್ದೇವೆ. ಕಲಾವಿದರು ಪ್ರಬಲರಾಗಿದ್ದಾರೆ. ಏಕೆಂದರೆ ನಾವೆಲ್ಲರೂ ಒಬ್ಬ ಮಹಾನ್ ತ್ಯಾಗಿಯ ಅನ್ನವನ್ನು ಉಂಡಿದ್ದೇವೆ. ನಾವೆಲ್ಲರೂ ಬೆವರ ಹನಿಯಲ್ಲಿ ಅನ್ನ ಬೆಳೆದ ರೈತನ ದಾನದಿಂದ ಉಂಡು ಬೆಳೆದಿದ್ದೇವೆ ವಿನಾ ಯಾವುದೇ ರಾಜಕಾರಣಿಗಳ ದೇಣಿಗೆಯಿಂದ ಮತ್ತು ಪಾಪಿಗಳ ಹಣದಿಂದ ಬೆಳೆದಿಲ್ಲ ಎಂದರು.ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ರಾಜಕಾರಣ, ಜಾತಿ, ಪಕ್ಷ ಪ್ರಾಬಲ್ಯ ಇಂತವುಗಳಿಂದ ದೂರವಿದ್ದರು. ಅವರು ಇದ್ದಾಗ ರಾಜಸತ್ಯ ಆಗತಾನೇ ಹೊರಗೆ ಹೋಗಿತ್ತು. ಪ್ರಜಾಸತ್ಯ ಆರಂಭವಾಗಿತ್ತು. ಅದೇ ಪರಿಸರದಲ್ಲಿ ಬೆಳೆದ ಪಂ. ಪುಟ್ಟರಾಜ ಗವಾಯಿಗಳಿಗೆ ಅವಾಗ ಗೊತ್ತಿದ್ದಿದ್ದು ಬರೀ ನಿರಂತರ ತಪಸ್ಸು. ಸಂಗೀತ ಆರಾಧನೆ, ಸಾಹಿತ್ಯ ರಚನೆ, ಲಿಂಗ ಪೂಜೆ, ಆಶ್ರಮದ ಮಕ್ಕಳನ್ನು ಎತ್ತರಕ್ಕೆ ಬೆಳೆಸುವುದು, ಅವರಿಗೆ ಅನ್ನ ಹಾಕುವುದಾಗಿತ್ತು. ಅವರು ಗೆದ್ದು ಹೋದರು. ಆದರೆ, ಈಗ ಅದು ಸುಲಭದ ಕಾಲ ಅಲ್ಲ. ಪಂಚಾಕ್ಷರ ಗವಾಯಿಗಳ ಕಾಲದಂತೆ ಪುಟ್ಟರಾಜ ಗವಾಯಿಗಳ ಕಾಲ ಇರಲಿಲ್ಲ. ಪುಟ್ಟರಾಜರ ಕಾಲದಂತೆ ಕಲ್ಲಯ್ಯಜ್ಜನವರ ಕಾಲ ಇಲ್ಲ. ಮುಂದೆ ಈಗಿನ ಕಲ್ಲಯ್ಯಜ್ಜನವರ ಕಾಲದಂತೆ ಮುಂದಿನ ಶ್ರೀಗಳ ಕಾಲವೂ ಆಗಿರುವುದಿಲ್ಲ. ಆದರೆ, ಕಾಲ ಬದಲಾಗುತ್ತದೆ. ಆಶ್ರಮದ ಪರಿಸರ ಬದಲಾವಣೆ ಆಗಬಾರದು ಎಂದರು.
ಈ ವೇಳೆ ಜಗದ್ಗುರು ಮಹಾಸನ್ನಿಧಿ ಅವರಿಂದ ಗಂಗಾವತಿ ತಾಲೂಕಿನ ಅರಳಹಳ್ಳಿ ಬೃಹನ್ಮಠದ ಶರಣಬಸವಾರ್ಯ ತಾತನವರ ಲೀಲಾಮೃತ ಪುರಾಣ ಹಾಗೂ ವಿಶ್ವಯೋಗಿ ವೇಮ ಮತ್ತು ಮಹಾಸಾಧ್ವಿ ಬದುಕು- ಚಿಂತನೆ ಗ್ರಂಥಗಳು ಬಿಡುಗಡೆಗೊಂಡವು.ಶಿವಾನಂದ ಬ್ರಹನ್ಮಠದ ಅಭಿನವ ಶಿವಾನಂದ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಯಲಬುರ್ಗಾದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಅರಳಿಹಳ್ಳಿಯ ಗವಿಸಿದ್ದೇಶ್ವರ ತಾತನವರು, ಜಿಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಬಸವರಾಜ ಕಡೆಮನಿ, ಜಯಶ್ರೀ ಉಗಲಾಟದ, ಶಿವಲೀಲಾ ಅಕ್ಕಿ, ಸುವರ್ಣಾ ಬಸವಾ, ಅಯಪ್ಪ ನಾಯ್ಕರ, ವೀರೇಶ ಪಾಟೀಲ, ದುರ್ಗಪ್ಪ ಹಿರೇಕುರುಬರ ಸೇರಿದಂತೆ ಮುಂತಾದವರು ಇದ್ದರು. ಕಲ್ಲಯ್ಯಜ್ಜನವರು ಅಬಾರ ಮನ್ನಣೆಗೈದರು. ಶಿವಲಿಂಗಯ್ಯ ಶಾಸ್ತ್ರಿಗಳು ಸಿದ್ದಾಪೂರ ಹಿರೇಮಠ ನಿರೂಪಿಸಿದರು. ನಂತರ ರಾತ್ರಿ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ ಬಂಜೆ ತೊಟ್ಟಿಲು ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನವಾಯಿತು.