ಕನ್ನಡ ರಾಜ್ಯೋತ್ಸವವನ್ನು ತಾಲೂಕು ಆಡಳಿತವು ಈ ವರ್ಷ ವಿಜೃಂಭಣೆಯಿಂದ ಆಚರಿಸುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಕನ್ನಡ ರಾಜ್ಯೋತ್ಸವವನ್ನು ತಾಲೂಕು ಆಡಳಿತವು ಈ ವರ್ಷ ವಿಜೃಂಭಣೆಯಿಂದ ಆಚರಿಸುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು. ಪ್ರತಿ ವರ್ಷ ಕಾಟಾಚಾರಕ್ಕೆ ಎಂಬಂತೆ ಆಚರಿಸುತ್ತಿದ್ದ ತಾಲೂಕು ಆಡಳಿತವು ಈ ವರ್ಷ ಅದ್ಧೂರಿಯಾಗಿ ಆಚರಿಸುವ ಮೂಲಕ ಎಲ್ಲ ಗಮನ ಸೆಳೆಯುವಂತೆ ಮಾಡಿದ್ದು ಕಂಡು ಬಂದಿತು. ಪಟ್ಟಣದ ಉಮಾ ವಿದ್ಯಾಲಯದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವಕ್ಕೆ ತಹಸೀಲ್ದಾರ ಧನಂಜಯ ಎಂ. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಕನ್ನಡವೆಂದರೆ ಅದು ಕೇವಲ ಒಂದು ಭಾಷೆಯಲ್ಲ ಅದು ವಿವಿಧ ಸಂಸ್ಕೃತಿಯ ಬೀಡು, ಕುವೆಂಪು, ಬೇಂದ್ರೆ ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ, ಆಲೂರು ವೆಂಕಟರಾಯರಂತ ಮಹಾನ್ ಚೇತನಗಳು ಕನ್ನಡ ಏಕೀಕರಣಕ್ಕೆ ಹೋರಾಡಿದ ಹಾಗೂ ಕನ್ನಡ ನಾಡಿನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ನ. 1973ರಂದು ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಗ್ಗೂಡಿಸಿದ ಸುದಿನ. ಇಂತಹ ಹೆಮ್ಮೆಯ ಕನ್ನಡ ನಾಡು ಇಂದು ಜಗತ್ತಿನ ಹಲವು ದೇಶಗಳಿಗೆ ಪ್ರೀತಿಯ ತಾಣವಾಗಿದೆ ಎಂದರೆ ತಪ್ಪಾಗಲಾರದು. ಕನ್ನಡ ಭಾಷೆಗೆ 2 ಸಾವಿರ ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಹೊಂದಿದೆ. ಕನ್ನಡ ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯ ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರು ಕನ್ನಡಿಗರು ಮಾಡಬೇಕು ಎಂದು ಹೇಳಿದರು.ಈ ವೇಳೆ ಗ್ಯಾರಂಟಿ ಅಧ್ಯಕ್ಷ ನಾಗರಾಜ ಮಡಿವಾಳರ, ಕರವೇ ಅಧ್ಯಕ್ಷ ಶರಣು ಗೋಡಿ, ತಾಪಂ ಇಓ ಮಂಜುಳಾ ಹಕಾರಿ. ಗ್ರೇಡ್ -2 ತಹಸೀಲ್ದಾರ ಮಂಜನಾಥ ಅಮಾಸಿ, ಕೃಷಿ ಇಲಾಖೆಯ ಮಂಜುನಾಥ ನರಸಮ್ಮನವರ ಎಸ್ಐ ಟಿ.ಕೆ.ರಾಠೋಡ, ಎಮ್.ಎ.ನದಾಫ್, ಟಾಕಪ್ಪ ಸಾತಪೂತೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಕನ್ನಡ ನಾಡಿನ ಇತಿಹಾಸ ಬಿಂಬಿಸುವ ರೂಪಕಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೇಳೆಯುವಲ್ಲಿ ಯಶಸ್ವಿಯಾಗಿದ್ದು ಕಂಡು ಬಂದಿತು.ಆನೆಯ ಪ್ರತಿಕೃತಿಯ ಮೇಲೆ ಅಂಬಾರಿಯಲ್ಲಿ ತಾಯಿ ಭುವನೇಶ್ವರಿ ಹೊತ್ತು ಸಾಗುತ್ತಿದ್ದ ದೃಶ್ಯ ಮನಮೋಹಕವಾಗಿತ್ತು, ಲಿಟಲ್ ಹಾರ್ಟ ಶಾಲೆಯ ಮಕ್ಕಳು ಕಿತ್ತೂರ ರಾಣಿ ಚನ್ನಮ್ಮನ ರೂಪಕ ಗಮನ ಸೇಳೆಯಿತು. ಸರ್ಕಾರಿ ಪ್ರಾಥಮಿಕ ಶಾಲೆ ನಂ-2 ಮಕ್ಕಳು ಒನಕೆ ಓಬವ್ವನ ರೂಪಕ ಸುಂದರವಾಗಿ ಕಂಡಿತು. ಒಟ್ಟಿನಲ್ಲಿ ತಾಲೂಕು ಆಡಳಿತವು ನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪಟ್ಟಣದ ವಿವಿಧ ಶಾಲೆಯ ಮಕ್ಕಳ ಪಟ್ಟಣದ ತುಂಬ ಕನ್ನಡ ಕಂಪನ್ನು ಬೀರುವ ಮೂಲಕ ಕನ್ನಡದ ಕಲರವ ಮನೆ ಮಾಡಿದ್ದು ವಿಶೇಷವಾಗಿತ್ತು.