ಭಕ್ತಿಯಿಂದ ನಮಿಸಿ ಭಗವಂತನ ಕೃಪೆಗೆ ಪಾತ್ರರಾಗಿ: ಶಾಸಕ ಚೆನ್ನಾರೆಡ್ಡಿ ತುನ್ನೂರು

| Published : Mar 09 2024, 01:35 AM IST

ಭಕ್ತಿಯಿಂದ ನಮಿಸಿ ಭಗವಂತನ ಕೃಪೆಗೆ ಪಾತ್ರರಾಗಿ: ಶಾಸಕ ಚೆನ್ನಾರೆಡ್ಡಿ ತುನ್ನೂರು
Share this Article
  • FB
  • TW
  • Linkdin
  • Email

ಸಾರಾಂಶ

ವಡಗೇರಾ ತಾಲೂಕಿನ ಕೋಡಾಲ ಗ್ರಾಮದ ಗಡ್ಡೆ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಮ್ಮ ನಿತ್ಯದ ಕಾರ್ಯಚಟುವಟಿಕೆಗಳ ಮಧ್ಯೆ ಒಂದಿಷ್ಟು ಸಮಯವನ್ನು ದೇವರ ಆರಾಧನೆಗೂ ಮೀಸಲಿಡಬೇಕು. ಭಕ್ತಿಯಿಂದ ನಮಿಸುವ ಮುಖಾಂತರ ಭಗವಂತನ ಕೃಪೆಗೆ ಪಾತ್ರರಾಗೋಣ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದ ಗಡ್ಡೆ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪ್ರವಚನ ಮಂಗಲ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಮಠ-ಮಂದಿರಗಳು ಕೇವಲ ಆಧ್ಯಾತ್ಮಿಕ ತಾಣಗಳು ಮಾತ್ರವಲ್ಲದೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಶ್ರೀಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಅತ್ಯಂತ ಕ್ರಿಯಾಶೀಲರಾಗಿದ್ದು ಅವರ ನೇತೃತ್ವದಲ್ಲಿ ಕೋಡಾಲ ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಉಪಯುಕ್ತ ಕಾರ್ಯಕ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳುವ ಮುಖಾಂತರ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷ್ಣಾ ನದಿಯ ಹೃದಯ ಭಾಗದಲ್ಲಿ ಇರುವ ಗಡ್ಡೆ ಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ತೆರಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 5 ಕೋಟಿ ರು. ಗಳ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಬದ್ಧನಾಗಿದ್ದು, ನನ್ನ ಅಧಿಕಾರವಧಿಯಲ್ಲೇ ಇದನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಡಾ. ಸಂಗಮ್ಮ ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ಮಕ್ಕಳನ್ನು ಟಿವಿ, ಮೊಬೈಲ್ ಗಳಿಂದ ದೂರವಿಟ್ಟು ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸಬೇಕು. ಸಾಮಾನ್ಯವಾಗಿ ಬಹುತೇಕ ಕಾರ್ಯಕ್ರಮಗಳಲ್ಲಿ ಪುರುಷರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಕೋಡಾಲಪುರ ಉತ್ಸವದಲ್ಲಿ ಮಹಿಳೆಯರೇ ಅತ್ಯಧಿಕ ಪ್ರಮಾಣದಲ್ಲಿ ಭಾಗವಹಿಸಿದ್ದು ಕಂಡು ಖುಷಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು, ಶಿವಲಿಂಗ ಮಹಾಸ್ವಾಮಿಗಳು ಖೇಳಗಿ, ಖ್ಯಾತ ಪ್ರವನಕಾರರಾದ ಶಿವಬಸವ ದೇವರು, ಹೊಸಪೇಠ ಕಂಪಿನ ಮಠದ ಸಿದ್ಧಲಿಂಗ ಸ್ವಾಮಿಗಳು, ಆದೋನಿಯ ಗುರುಸಿದ್ಧ ಸ್ವಾಮಿಗಳು ಸೇರಿದಂತೆ ಹಿರಿಯ ಮುಖಂಡರಾದ ಸಿದ್ದಣಗೌಡ ಕಾಡಂನೋರ, ಮಂಜೂಳ ಗೂಳಿ, ಮಾಣಿಕರೆಡ್ಡಿ ಕುರಕುಂದಾ, ಶಿವರಾಜಪ್ಪಗೌಡ, ಬಸವರಾಜ ಸನ್ನದ, ಡಾ. ಸಿದ್ಧರಾಜರೆಡ್ಡಿ ಪಾಟೀಲ, ಪ್ರಕಾಶ ಎಸ್. ಅಂಗಡಿ ಕನ್ನೆಳ್ಳಿ ಸೇರಿದಂತೆ ಇತರರಿದ್ದರು. ಬಸವಲಿಂಗಪ್ಪ ಜಿ. ಕಲಾಲ ನಿರೂಪಿಸಿದರು. ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ 5 ಜನ ಸಾಧಕರನ್ನು ಗುರುತಿಸಿ ಸಿದ್ಧ ಬಸವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಕ್ತರ ಭಕ್ತಿಯೇ ಶ್ರೀಮಠದ ಶಕ್ತಿ

ಕೃಷ್ಣಾ ನದಿಯ ನಡು ಗಡ್ಡೆಯಲ್ಲಿರುವ ಗಡ್ಡೆ ಬಸವೇಶ್ವರ ದೇವಸ್ಥಾನ ಐತಿಹಾಸಿಕವಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸಿದ್ಧಿ ಪುರುಷ ಸಿದ್ಧಲಿಂಗ ಶ್ರೀಗಳಾಗಿದ್ದಾರೆ. ನಾವು ಕೇವಲ ನೆಪ ಮಾತ್ರ ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಶ್ರೀಮಠದ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತಿರುವುದು ಅತ್ಯಂತ ಸಂತೋಷದ ವಿಚಾರ. ಭಕ್ತರ ಭಕ್ತಿಯೇ ಶ್ರೀಮಠದ ಶಕ್ತಿ ಎಂದು ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.8ವೈಡಿಆರ್3