ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಪರಕೀಯರ ದಾಸ್ಯದಿಂದ ನಮ್ಮ ದೇಶವನ್ನು ಉಳಿಸಿಕೊಳ್ಳಲು ಸಹಸ್ರಾರು ಮಹನೀಯರು, ಹೋರಾಟಗಾರರು, ದೇಶ ಪ್ರೇಮಿಗಳು ತ್ಯಾಗ ಬಲಿದಾನ ಮಾಡಿದ್ದು ಈ ಎಲ್ಲಾ ಮಹಾಚೇತನರುಗಳನ್ನು ಸ್ಮರಿಸಿ ಗೌರವ ನಮನ ಸಲ್ಲಿಸುವುದು ರಾಷ್ಟ್ರದ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ತಿಳಿಸಿದರು.ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ದೇಶವನ್ನು ಸ್ವಾತಂತ್ರ್ಯಗೊಳಿಸಲು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಹಲವಾರು ಧೀಮಂತ ನಾಯಕರು ಅಪರಿಮಿತ ಕೊಡುಗೆ ನೀಡಿದ್ದು ದೇಶದ ಏಕತೆ, ಅಖಂಡಂತೆಗೆ ನಾವೆಲ್ಲರೂ ಶ್ರಮಿಸಬೇಕಿದೆ. ರಾಷ್ಟ್ರದ ನೆಲ, ಜಲ, ಭಾಷೆ, ಸಂಸ್ಕೃತಿ, ಧರ್ಮಗಳನ್ನು ರಕ್ಷಿಸುವುದು ಸಮಾಜಮುಖಿ ಸೇವಾ ಕಾರ್ಯಗಳನ್ನು ಪಾಲಿಸುವುದು ನಮ್ಮ ಗುರಿಯಾಗಿದೆ. ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ, ದೇಶಕ್ಕೆ ಸಂವಿಧಾನ ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ದೇಶದ ಎಲ್ಲಾ ಮಹಾನ್ ನಾಯಕರನ್ನು ನೆನೆಯುತ್ತ ಅವರ ಆದರ್ಶಗಳನ್ನು ಯುವಪೀಳಿಗೆ ಪಾಲಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಷಡಕ್ಷರಿ ಮಾತನಾಡಿ, ಮಹನೀಯರ ತ್ಯಾಗ ಬಲಿದಾನದಿಂದ ಬಂದಿರುವ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಉಳಿಸಿಕೊಳ್ಳುವ ಮೂಲಕ ದೇಶದ ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ಸ್ವಾತಂತ್ರ್ಯಾನಂತರ ನಮ್ಮ ದೇಶ ಸಾಕಷ್ಟು ಅಭಿವೃದ್ದಿ ಹೊಂದಿದ್ದು ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ದೇಶದ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಬಹುತೇಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದು ಇದರಿಂದ ಅನುಕೂಲ ಹಾಗೂ ಅನಾನುಕೂಲವೂ ಆಗಬಹುದು. ಯುವಕರು ಸ್ವಾತಂತ್ರ್ಯ ತಂದುಕೊಟ್ಟಂತಹ ಮಹಾತ್ಮರ ಹಾದಿಯಲ್ಲಿ ನಡೆದು ದೇಶದ ಅಭಿವೃದ್ದಿಗೆ ಶ್ರಮಿಸಬೇಕು. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಮೂಲಕ ರಾಷ್ಟ್ರಕ್ಕೆ ಗೌರವ ಸಲ್ಲಿಸಬೇಕೆಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನ್‌ಕುಮಾರ್, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಡಿವೈಎಸ್‌ಪಿ ಯಶ್‌ಕುಮಾರ್‌ಶರ್ಮ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಂ. ಸುದರ್ಶನ್, ಬಿಇಓ ಚಂದ್ರಯ್ಯ, ಬೆಸ್ಕಾಂ ಮನೋಹರ್ ಸೇರಿದಂತೆ ವಿವಿಧ ನಾಗರೀಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರುಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಪೊಲೀಸ್, ಗೃಹರಕ್ಷಕ ದಳ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ ತಂಡದವರಿಂದ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು.