ಗಣರಾಜ್ಯೋತ್ಸವ ದಿನದಂದು ಸಮೃದ್ಧ ಶಕ್ತಿಶಾಲಿ ಭಾರತದ ಕನಸನ್ನು ನನಸು ಮಾಡಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ.

ಹಳಿಯಾಳ ತಾಲೂಕಿನಾದ್ಯಂತ 77ನೇ ಗಣರಾಜ್ಯೋತ್ಸವ ಆಚರಣೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಗಣರಾಜ್ಯೋತ್ಸವ ದಿನದಂದು ಸಮೃದ್ಧ ಶಕ್ತಿಶಾಲಿ ಭಾರತದ ಕನಸನ್ನು ನನಸು ಮಾಡಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಸಂವಿಧಾನದ ಮೌಲ್ಯಗಳನ್ನು ಗೌರವಿಸುತ್ತಾ ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಸಂಕಲ್ಪವನ್ನು ಮತ್ತೋಮ್ಮೆ ಮಾಡೋಣ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಸೋಮವಾರ ತಾಲೂಕಾಡಳಿತ ಸೌಧದ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕುಗಳ ಜೊತೆಗೆ ಕರ್ತವ್ಯ ಜವಾಬ್ದಾರಿಗಳನ್ನು ತಿಳಿಸುತ್ತದೆ. ಸಮಾನತೆಯ ಆಶಯಗಳ ಮೇಲೆ ರೂಪಗೊಂಡ ನಮ್ಮ ಸಂವಿಧಾನವು ಸ್ವಾತಂತ್ರ್ಯದ ಸಾರ್ಥಕತೆಯನ್ನು ಪ್ರತಿಬಿಂಬಿಸುತ್ತಿದೆ. ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಹಾಗೂ ಬಾಂಧವ್ಯದ ಮೇಲೆ ಆಧಾರಿತವಾಗಿದೆ ಎಂದರು.

ದೇಶವು ಅಭಿವೃದ್ಧಿ ಪಥದಲ್ಲಿ ಮಹತ್ವದ ಹೆಜ್ಜೆಗಳಿನ್ನುಡುತ್ತಿದ್ದರೂ ನಿರುದ್ಯೋಗ, ಸಾಮಾಜಿಕ ಅಸಮಾನತೆ ಸೇರಿದಂತೆ ಇನ್ನೂ ಹಲವಾರು ಸಮಸ್ಯೆ-ಸವಾಲುಗಳು ಇನ್ನೂ ನಮ್ಮ ಮುಂದೇ ನಿಂತಿದ್ದು, ಯುವಪೀಳಿಗೆಯ ಸಮಸ್ಯೆಗಳಿಗೆ ಸಮರ್ಥ ಪರಿಹಾರ ಕಂಡು ಹಿಡಿಯುವುದು ಸರ್ಕಾರಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಧ್ವಜಾರೋಹಣ ನೆರವೆರಿಸಿದರು. ಗಣರಾಜ್ಯೋತ್ಸವ ನಿಮಿತ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಶಾಸಕರು ಬಹುಮಾನ ವಿತರಿಸಿದರು. ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಮಂಗೇಶ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ದ್ರೌಪದಿ ಅಗಸರ, ಮಾಜಿ ಉಪಾಧ್ಯಕ್ಷ ಸತ್ಯಜಿತ ಗಿರಿ, ಲಕ್ಷ್ಮೀ ವಡ್ಡರ, ಮುಖಂಡರಾದ ಫಯಾಜ್ ಶೇಖ್, ಶಮೀಮಬಾನು ಜಂಬೂವಾಲೆ, ಸುವರ್ಣ ಮಾದರ, ಶಾಂತಾ ಹಿರೇಕರ ಹಾಗೂ ಇತರರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಧ್ವಜಾರೋಹಣದ ನಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಶಾಲಾ ಮಕ್ಕಳಿಂದ ಭವ್ಯ ಮೆರವಣಿಗೆಯು ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ:

ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣದ ನಂತರ ಪೊಲೀಸ್, ಗೃಹರಕ್ಷಕ ದಳ, ಸ್ಕೌಟ್ಸ್ ಗೈಡ್ಸ್ ಮತ್ತು ಎನ್.ಸಿ.ಸಿ ಹಾಗೂ ವಿವಿಧ ಶಾಲಾ ಕಾಲೇಜುಗಳ ವತಿಯಿಂದ ನಡೆದ ಪಥಸಂಚಲನದಲ್ಲಿ ಗೌರವ ವಂದನೆಯನ್ನು ಸ್ವೀಕರಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ವಿವಿಧೆಡೆ ಆಚರಣೆ:

ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಶಾಸಕರ ಕಾರ್ಯಾಲಯದಲ್ಲಿ ಶಾಸಕ ದೇಶಪಾಂಡೆ ಧ್ವಜಾರೋಹಣ ನೆರವೇರಿಸಿದರು. ಮುತ್ತಲಮುರಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ನೂತನವಾಗಿ ನಿರ್ಮಿಸಿದ ಧ್ವಜಕಟ್ಟೆಯನ್ನು ಶಾಸಕರು ಲೋಕಾರ್ಪಣೆ ಮಾಡಿದರು. ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಧ್ವಜಾರೋಹಣ ನೆರವೆರಿಸಿದರು. ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪೋರ್ಮನ್ ಶಶಿಶೇಖರ್ ಭಟ್ ಧ್ವಜಾರೋಹಣ ನೆರವೇರಿಸಿದರು. ಗಣರಾಜ್ಯೋತ್ಸವ ನಿಮಿತ್ತ ವಿವಿಧೆಡೆ ಸಾಂಸ್ಕೃತಿಕ ಸ್ಪರ್ಧೆ ನಡೆದವು.