ಸಾರಾಂಶ
ರಾಜಕೀಯ ಸ್ವಾತಂತ್ಯ ದೊರೆತಂತೆ ಜನತೆಗೆ ಸಾಮಾಜಿಕ, ಆರ್ಥಿಕ ನ್ಯಾಯವು ಸಹ ಸಿಗಬೇಕಿದೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಭಾರತದ ಸಂವಿಧಾನದಲ್ಲಿ ಪ್ರತಿಜ್ಞೆ ಮಾಡಿರುವ ಸಾಮಾಜಿಕ, ಆರ್ಥಿಕ ನ್ಯಾಯವು ಜಿಲ್ಲೆಯ ಪ್ರತಿಯೊಬ್ಬ ನಾಗರಿಕನಿಗೆ ತಲುಪುವ ಹಾಗೆ ಕಾರ್ಯಪ್ರವೃತ್ತರಾಗಲು ಎಲ್ಲರೂ ಸೇರಿ ಪ್ರತಿಜ್ಞೆ ಮಾಡೋಣ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದಾಗಿ ಘೋಷಣೆ ಮಾಡಿದ್ದೇವೆ. ರಾಜಕೀಯ ಸ್ವಾತಂತ್ಯ ದೊರೆತಂತೆ ಜನತೆಗೆ ಸಾಮಾಜಿಕ, ಆರ್ಥಿಕ ನ್ಯಾಯವು ಸಹ ಸಿಗಬೇಕಿದೆ ಎಂದರು.ಯಾದಗಿರಿ ಜಿಲ್ಲೆಗೆ ಹೋಲಿಸಿದರೆ ಕೊಪ್ಪಳ ಜಿಲ್ಲೆಯ ತಲಾ ಆದಾಯ ಕಡಿಮೆ ಇದೆ. ರಾಜ್ಯದಲ್ಲಿ ಕೆಳಗಿನಿಂದ 5ನೇ ಸ್ಥಾನದಲ್ಲಿದೆ. ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯವಾಗಿದೆ. ಈ ದಿಶೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸಹ ಹೊಣೆಗಾರಿಕೆಯಿಂದ ಕಾರ್ಯನಿರ್ವಹಣೆ ಮಾಡಿ ಜಿಲ್ಲೆಯ ಜನರ ಜೀವನ ಮಟ್ಟದಲ್ಲಿ ಗಣನೀಯ ಸುಧಾರಣೆ ತರಬೇಕಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ಜಿಲ್ಲೆಯ ಸಾರ್ವಜನಿಕರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಸುಧಾರಿಸುತ್ತಿದೆ ಎಂದು ತಿಳಿಸಿದರು.
ಸಂವಿಧಾನದಲ್ಲಿ ಹೇಳಿದ ಸಾಮಾಜಿಕ ನ್ಯಾಯದ ಸಾಕಾರಕ್ಕೆ ನಾವೆಲ್ಲರೂ ಹಗಲಿರುಳು ಶ್ರಮಿಸಬೇಕು. ಸರ್ಕಾರಿ ಕಚೇರಿಗಳಿಗೆ ಯಾವುದೇ ಸಹಾಯ, ಸಹಕಾರ ಕೇಳಿ ಬರುವ ಜನತೆಗೆ ನಾವು ಪ್ರಾಮಾಣಿಕವಾಗಿ ಸ್ಪಂದನೆ ನೀಡುತ್ತೇವೆ ಎನ್ನುವ ಸಂಕಲ್ಪ ಮಾಡಿ ಮುನ್ನುಗ್ಗೋಣ ಎಂದು ತಿಳಿಸಿದರು.ಜಿಲ್ಲಾಡಳಿತ ಭವನಕ್ಕೆ ನವೀಕರಣ:ಕೊಪ್ಪಳದಲ್ಲಿ ಜಿಲ್ಲಾಡಳಿತ ಭವನ ಸ್ಥಾಪನೆಯಾಗಿ ಈಗಾಗಲೇ 25 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆ ರಜತ ಮಹೋತ್ಸವವು ಕಳೆದ ವರ್ಷ ನಡೆದಿದೆ. ಇದೀಗ ವಿಶೇಷ ಅನುದಾನದಿಂದ ಜಿಲ್ಲಾಡಳಿತ ಭವನವನ್ನು ನವೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.