ಸಾರಾಂಶ
ಆನವಟ್ಟಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳು ಜಾರಿಯಾಗುದಿಲ್ಲ ಎಂದು ಬಿಜೆಪಿಗರು ಅಪಪ್ರಚಾರ ಮಾಡಿದ್ದರು. ಈಗ ಧಮ್ ಇದ್ದರೆ ಬಿಜೆಪಿ ಅವರು ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ರಾಜ್ಯದ ಜನತೆ ಮುಂದೆ ಹೇಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಸವಾಲು ಹಾಕಿದರು.ಮಂಗಳವಾರ ಭಾರಂಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬದುಕಿಗೆ ಬೆಳಕು ನೀಡುವಂತಹ ಯೋಜನೆಗಳನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ. ಅಧಿಕಾರಿಗಳು ಗ್ಯಾರಂಟಿ ಯೋಜನೆಗಳು ಸಿಗದೆ ಇರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.ಅಭಿವೃದ್ಧಿ ಕೆಲಸಗಳು ತಡವಾಗಿವೆ ನಿಜ. ಹಿಂದಿನ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯುವ ಆಸೆಯಿಂದ ಹಣಕಾಸು ತೆಗೆದು ಇಡದೆ ಯೋಜನೆಗಳ ಶಂಕುಸ್ಥಾಪನೆ ಮಾಡಿದ್ದರು. ಅವರುಗಳಿಗೆ ಹಣ ಹೊಂದಿಸಿ, ನಂತರ ಹೊಸ ಯೋಜನೆಗಳಿಗೆ ಅನುದಾನ ಒದಗಿಸಲು ತಡವಾಗಿದೆ. ಇನ್ನೂ ಮುಂದೆ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಳ್ಳತ್ತವೆ ಎಂದು ಹೇಳಿದರು.
ಗ್ರಾಮದ ಶಾಲಾ ಮಕ್ಕಳು ಬಸ್ ಕೇಳಿದ್ದಾರೆ. ಸದ್ಯದಲ್ಲೇ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇನೆ, ಈ ಭಾಗಕ್ಕೆ ಪ್ರೌಢಶಾಲೆ ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿದರು.ರಾಜೀವ್ ಗಾಂಧಿ ಸೇವಾಕೇಂದ್ರ ಯೋಜನೆ ಅಡಿಯಲ್ಲಿ ನಾನು ಶಾಸಕನಾಗಿದ್ದಾಗ ಕುಪ್ಪಗಡ್ಡೆಯಲ್ಲಿ ಮೊದಲ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಮಾಡಿದ್ದೆ. ಈಗ ಸಚಿವನಾಗಿ ಈ ಯೋಜನೆಯ ತಾಲೂಕಿನ ಕೊನೆಯ ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟನೆ ಮಾಡುತ್ತಿದ್ದೇನೆ ಅಂದರೆ ಸೊರಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಕಟ್ಟಡ ಹೊಂದಿವೆ ಎಂದರು.
ಸಮಾರಂಭದಲ್ಲಿ ಭಾರಂಗಿ ಗ್ರಾಪಂ ಅಧ್ಯಕ್ಷೆ ಕಲಾವತಿ ಮಂಜಪ್ಪ, ಉಪಾಧ್ಯಕ್ಷೆ ಭಾಗ್ಯ ಬಸವರಾಜ್, ಎಡಿಪಿಆರ್ ಶ್ರೀರಾಮ್, ಪಿಡಿಒ ಬಸವರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ಕಾಂಗ್ರೆಸ್ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಮುಖಂಡ ಕಡ್ಲೇರ್ ರುದ್ರಪ್ಪ, ಶಿವಕುಮಾರ್ ತತ್ತೂರು, ಎಲ್.ಜಿ.ಮಾಲತೇಶ್, ಮಾರುತಿಕುಮಾರ್, ಚೈತ್ರ ಸುರೇಶ್, ಅಂಜಲಿ ಸಂಜೀವ್, ಯೋಗೇಂದ್ರ ಗೌಡ ಇದ್ದರು.