ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯದ ಶ್ರೇಷ್ಠತೆ, ಐಕ್ಯತೆ, ಒಗ್ಗಟ್ಟಿಗೆ ನಾವೆಲ್ಲರೂ ನಿಷ್ಠೆಯಿಂದ ಶ್ರಮಿಸೋಣ ಎಂದು ರಾಜ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.1ರ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಗೂ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸ್ವಾಭಿಮಾನಿ ಕನ್ನಡಿಗರಾಗಿ ಈ ನಾಡಿನ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೊಡುಗೆ ನೀಡಲು ಒಗ್ಗಟ್ಟಾಗಿ ಶ್ರಮಿಸೋಣ. ಮಾತೃಭಾಷೆ ಬೆಳೆಸಲು ಜಾತಿ, ಮತ, ಪಂಥಗಳ ಬೇಧ ಭಾವ ತೊರೆದು ಈ ನಾಡಿನ ಸೇವೆ ಮಾಡೋಣ ಎಂದರು.ಕನ್ನಡ ಭಾಷೆ ಶಾಸ್ತ್ರೀಯ ಭಾಷೆಯಾಗಿ ಜನಮಾನಸದಲ್ಲಿ ಉಳಿದಿದೆ. ರಾಷ್ಟ್ರಕೂಟರು, ಬಾದಾಮಿ ಚಾಲುಕ್ಯರು, ಕಲ್ಯಾಣ ಚಾಲುಕ್ಯರು, ಶಾತವಾಹನರು, ಮೌರ್ಯರು, ಕದಂಬರು, ಗಂಗರು, ಹೊಯ್ಸಳರು, ವಿಜಯನಗರ ಅರಸರು, ಬಹಮನಿ ಆದಿಲ್‌ಶಾಹಿ ಸುಲ್ತಾನರು, ಮೈಸೂರು ಒಡೆಯರು, ಹೈದರ್ ಅಲಿ, ಟಿಪ್ಪು ಸುಲ್ತಾನ್, ಬ್ರಿಟೀಷರ ಆಳ್ವಿಕೆಯನ್ನು ಕನ್ನಡ ನಾಡು ಕಂಡಿದೆ. ಬಹುಧರ್ಮ, ಬಹುಜಾತಿ, ಬಹುಭಾಷೆ, ಬಹುಸಂಸ್ಕೃತಿಯನ್ನು ಹೊಂದಿರುವ ನಾಡಾಗಿದೆ ಎಂದು ಹೇಳಿದರು.ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ ಉಳಿದ ಕನ್ನಡದ ಪ್ರದೇಶಗಳೆಲ್ಲ ಮುಂಬೈ, ಮದ್ರಾಸ್, ಕೊಡಗು ಇತರ ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದವು. ಆಗ ಬ್ರಿಟಿಷರ ಆಡಳಿತವಿತ್ತು. ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಎದುರಾಗಿತ್ತು. ಅಂದು ಕನ್ನಡಿಗರಿದ್ದರೂ, ಕನ್ನಡ ಸಂಸ್ಕೃತಿ ಇದ್ದರೂ ಕರ್ನಾಟಕವಿರಲಿಲ್ಲ. ಹೀಗಾಗಿ ಕರ್ನಾಟಕವನ್ನು ಒಂದುಗೂಡಿಸಲು ಹೋರಾಟ ಅನಿವಾರ್ಯವಾಯಿತು ಎಂದು ತಿಳಿದರು.ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಮೈಸೂರಿನೊಂದಿಗೆ ವಿಲೀನಗೊಂಡವು. ಹೊಸ ರಾಜ್ಯಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಯಿತು. ನವೆಂಬರ್ 1, 1956 ರಂದು ಏಕೀಕೃತ ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ದೇವರಾಜ್ ಅರಸರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನವೆಂಬರ್ 1, 1973 ರಂದು ನಾಮಕರಣ ಮಾಡಲಾಯಿತು ಎಂದು ತಿಳಿಸಿದರು.
ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ: ಕರ್ನಾಟಕ ಸಂಭ್ರಮ-50ರ (ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ) ಅಂಗವಾಗಿ, ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಯಾದಗಿರಿ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣವನ್ನು ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ನೆರವೇರಿಸಿದರು.ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ
ಯಾದಗಿರಿ : ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 69ನೇ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರ ಸನ್ಮಾನಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದ ಶರಣಕುಮಾರ ಹಣಮಂತ್ರಾಯ, ಕಲೆ ಕ್ಷೇತ್ರದಲ್ಲಿ ಶಹಾಪೂರ ತಾಲೂಕಿನ ಮಡ್ನಾಳ ಗ್ರಾಮದ ಶರಣಪ್ಪ ಅಯ್ಯಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಯಾದಗಿರಿ ನಗರ ಶಿವನಗರ ಮಡಿವಾಳಪ್ಪ ಸಂಗಪ್ಪ ಸಜ್ಜನ, ಸಮಾಜ ಸೇವೆಯಲ್ಲಿ ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್‌ನ ನಿವಾಸಿ ಜಯಲಕ್ಷ್ಮೀ ಆರ್, ಪ್ರತಿಕಾರಂಗದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಬಸವಂತರಾಯಗೌಡ ನಿಂಗನಗೌಡ ಪಾಟೀಲ್, ಕ್ರೀಡಾ ಕ್ಷೇತ್ರದಲ್ಲಿ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ಕುಮಾರಿ ಮುತ್ತಮ್ಮ ಬಿ.ಸಾ, ಶಾಂತಿ ಸೌಹಾರ್ದತೆ ಕ್ಷೇತ್ರದಲ್ಲಿ ಸುರಪುರ ನಗರದ ವೆಂಕಟೇಶ್ವರ ಧರ್ಮಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.