ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಂಜಾರ ಸಮುದಾಯದವರು ಕಾಯಕ ಜೀವಿಗಳಾಗಿದ್ದು, ಶಿವನ ಆಶೀರ್ವಾದಿಂದ ಹುಟ್ಟಿಬಂದ ಸಂತ ಸೇವಾಲಾಲ್ ತಪಸ್ಸಿನಿಂದ ಶಕ್ತಿ ಪಡೆದು ಪವಾಡ ಪುರುಷರಾದವರು ಎಂದು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ಹೇಳಿದರು.ನವನಗರದ ಕಲಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂತ ಸೇವಾಲಾಲ್ ಮಹಾರಾಜರು ಸಮಾಜ ಸುಧಾರಣೆಗೆ ಹತ್ತು ಹಲವಾರು ಪವಾಡ ಮಾಡಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಚಂದ್ರಶೇಖರ ಕಾಳನ್ನವರ ಮಾತನಾಡಿ, ಸೇವಾಲಾಲ ಒಬ್ಬ ಸನ್ಯಾಸಿ, ಪವಾಡ ಪುರುಷ ಆಗಿರದೇ ಶ್ರೇಷ್ಠ ತತ್ವಜ್ಞಾನಿ, ಸೇನಾನಿ, ಸಾಂಸ್ಕೃತಿಕ ನಾಯಕ, ಕಾಲಜ್ಞಾನಿ, ನಾಟಿವೈದ್ಯ ಹಾಗೂ ಚಾರಿತ್ರಿಕ ಪುರುಷರಾಗಿದ್ದವರು. ಇವರು ಸತ್ತವರ, ಕಷ್ಟದಲ್ಲಿರುವ ಮನೆಗೆ ಹೋಗಿ ಸಾಂತ್ವನ ಹೇಳುವ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಮಾನವ ಕುಲದ ಉದ್ದಾರಕ್ಕೆ ತತ್ವ, ಸಿದ್ದಾಂತ ಹಾಗೂ ಚಿಂತನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.ಕುಮಾರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಪಂ ಅಧಿಕಾರಿ ಎಸ್.ಎಂ. ಕಾಂಬಳೆ, ಗ್ಯಾರಂಟಿ ಯೊಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್.ಎಂ. ರಾಂಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ , ಸಮುದಾಯ ಮುಖಂಡರಾದ ರಂಗನಗೌಡ ಶಿರೂರ, ಬಸಪ್ಪ ನಾಯಕ, ಎಂ.ಬಿ. ನಾಯಕ, ಬಲರಾಮ ಪವಾರ, ರಾಜು ರಾಠೋಡ, ಚಿದಾನಂದ ನಾಯಕ, ಮೋತಿಲಾಲ್ ನಾಯಕ, ತುಕಾರಾಮ ನಾಯಕ, ರಮೇಶ ಚವ್ಹಾಣ ಸೇರಿದಂತೆ ಇತರರು ಇದ್ದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.
ಭಾವಚಿತ್ರದ ಅದ್ಧೂರಿ ಮೆರವಣಿಗೆ:ಇದಕ್ಕೂ ಮುಂಚೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ಸಮುದಾಯ ಮುಖಂಡರು ಪಾಲ್ಗೊಂಡಿದ್ದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ವಿವಿಧೆಡೆ ಸಂಚರಿಸಿ ನವನಗರ ಕಲಾಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳ ಲಂಬಾಣಿ ಕುಣಿತ ತಂಡಗಳು ಭಾಗವಹಿಸಿದ್ದವು.