ವಿಷ್ಣು ಸಹಸ್ರನಾಮ ಪಾರಾಯಣ ಕ್ರಾಂತಿಯಾಗಲಿ: ಪಲಿಮಾರು ಶ್ರೀ

| Published : Feb 06 2024, 01:36 AM IST / Updated: Feb 06 2024, 01:00 PM IST

ಸಾರಾಂಶ

ಉಡುಪಿ ಅಷ್ಠಮಠಗಳಲ್ಲಿ ಒಂದಾಗಿರುವ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥರು ವಿಷ್ಣು ಸಹಸ್ರನಾಮ ಸ್ತ್ರೋತ್ರ ಪಾರಾಯಣದಿಂದ ಭವರೋಗಳಿಂದ ಮುಕ್ತಿ ನಿಶ್ಚಿತ, ಈ ಸ್ತ್ರೋತ್ರ ಪಾರಾಯಣ ಮಾಡುವವರ ವೈಯಕ್ತಿಕ ಕಲ್ಯಾಣದ ಜೊತೆಗೇ ಇಡೀ ಲೋಕ ಕಲ್ಯಾಣವೂ ಆಗುವುದೆಂದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಷ್ಣು ಸಹಸ್ರನಾಮವನ್ನು ಸ್ತೋತ್ರಗಳ ರಾಜನೆಂದು ಬಣ್ಣಿಸಿರುವ ಉಡುಪಿ ಅಷ್ಠಮಠಗಳಲ್ಲಿ ಒಂದಾಗಿರುವ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥರು ಈ ಸ್ತ್ರೋತ್ರ ಪಾರಾಯಣದಿಂದ ಭವರೋಗಳಿಂದ ಮುಕ್ತಿ ನಿಶ್ಚಿತ, ಈ ಸ್ತ್ರೋತ್ರ ಪಾರಾಯಣ ಮಾಡುವವರ ವೈಯಕ್ತಿಕ ಕಲ್ಯಾಣದ ಜೊತೆಗೇ ಇಡೀ ಲೋಕ ಕಲ್ಯಾಣವೂ ಆಗುವುದೆಂದು ಹೇಳಿದ್ದಾರೆ.

ವಿಶ್ವ ಮಧ್ವ ಮಹಾ ಪರಿಷತ್ ಕಲಬುರಗಿ ಘಟಕ ಅಡಿಯಲ್ಲಿ ಹಂಸ ನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘಗಳ 7 ನೇ ವಾರ್ಷಿಕೋತ್ಸವ ದ ಅಂಗವಾಗಿ ಸೋಮವವಾರ ಇಲ್ಲಿನ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ನಡೆದ ದಿ. ಜಯತೀರ್ಥ ಕಾಗಲ್ಕರ್‌ ಸ್ಮರಣಾರ್ಥ ನೀಡುವ ಪಾರಾಯಣ ಪ್ರವೀಣ ಪ್ರಶಸ್ತಿಯನ್ನು ಶ್ರೀ ರಾಮ ಪಾರಾಯಣ ಸಂಘದ ಜಗನ್ನಾಥ ಸಗರ್‌ ಹಾಗೂ ಹನುಮಾನ್‌ ಪಾರಾಯಣ ಸಂಘದ ವಿಶ್ವನಾಥ ಕುಲಕಮರ್ಣಿಯವರಿಗೆ ಪ್ರದಾನ ಮಾಡಿ ಸಂಸ್ಥಾನ ಪೂಜೆ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು.

ಸಹಸ್ರ ಎಂದರೆ ಕನ್ನಡದಲ್ಲಿ ಸಾವಿರ ಎಂದರ್ಥ, ವಿಷ್ಣು ಸಹಸ್ರನಾಮ ಎಂದರೆ ಕನ್ನಡದಲ್ಲಿ ವಿಷ್ಣುವಿನ ಸಾವಿರ ನಾಮ ಎಂದಾಗುತ್ತದೆ, ಇದನ್ನೇ ನಿಧಾನವಾಗಿ ಹೇಳಿದೆವಾದರೆ ವಿಷ್ಣು ಸಾವಿರದ ನಾಮ, ಎಂದಿಗೂ ಸಾವು ಇರದ ನಾಮ ಎಂದು ಬಣ್ಣಿಸಿದರಲ್ಲದೆ, ಸ್ತುತಿ, ಸ್ತೋತ್ರಪ್ರಿಯ ಭಗವಂತ ಸ್ವತಃ ಈ ನಾಮವಳಿಗೆ ಪ್ರಸನ್ನಚಿತ್ತನಾಗುತ್ತಾನೆ. ಹೀಗಾಗಿ ವಿಷ್ಣುವಿನ ಸಹಸ್ರ ನಾಮಗಳ ಪಾರಾಯಣ ಮಾಡುವುದೆಂದರೆ ಸಾಕ್ಷಾತ್‌ ಭಗವಂತನ ಕೃಪೆಗೆ ಪಾತ್ರರಾದಂತೆಯೇ ಸರಿ ಎಂದರು.

ಕಲಬುರಗಿ ಭಾಗದಲ್ಲಿ ನೂರಾರು ಸದಸ್ಯರು ಪಾರಾಯಣಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರೋದು ಸಂತಸದ ಸಂಗತಿ ಎಂದ ಗುರುಗಳು ಬರುವ ದಿನಗಳಲ್ಲಿ ಪಾರಾಯಣ ಪರಾಕ್ರಮ ರೂಪದಲ್ಲಿ ಹೊರಹೊಮ್ಮಲಿ, ಸಹಸ್ರಾರು ಮಂದಿ ಒಂದಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಿ ಎಂದು ಅನುಗ್ರಹಿಸಿದರು.

ಪಲಿಮಾರು ಮಠದ ಕಿರಿಯ ಪಟ್ಟ ಶ್ರೀ ವಿದ್ಯಾರಾಜೇಶ್ವರ ತೀರ್ಥರು ತಮ್ಮ ಅನುಗ್ರಹ ಸಂದೇಶದಲ್ಲಿ ಭಾರತ ಬೆಳಗುತ್ತಿದೆ. ಸನಾತನ ಧರ್ಮ, ಪರಂಪರೆಗೆ ಮತ್ತೆ ಬೆಲೆ ಬಂದಿದೆ. ಸಂಸ್ಕೃತಿಯ ಪುನರುತ್ಥಾನವಾಗುತ್ತದೆ. ಜಗತ್ತಿನಲ್ಲಿಯೇ ಎಲ್ಲರೂ ಭಾರತದ ಸಂಸ್ಕೃತಿ, ಧರ್ಮದ ಆಚರಮೆಗಳನ್ನು ಬೆರಗಿನಿಂದ ನೋಡುವಂತಾಗಿದೆ ಎಂದರು.

ಯಥಾ ರಾಜ ತಥಾ ಪ್ರಜಾ ಎಂಬಂತೆ ಭಾರತದಲ್ಲೀಗ ಆಳುವವರು ಧರ್ಮಿಷ್ಠರಾಗಿರೋದರಿಂದ ಸಂಸ್ಕೃತಿ, ಧರ್ಮದ ಪುನರುತ್ಥಾನದ ಕೆಲಸಗಲು ಸಾಗಿವೆ ಎಂದು ಪ್ರಸನ್ನಚಿತ್ತರಾಗಿ ಹೇಳುತ್ತ ಪಾರಾಯಣ ಕ್ರಾಂತಿ ಕಲಬುರಗಿಯಲ್ಲಾಗಲಿ, ಇದರಿಂದ ಎಲ್ಲರ ಮನೆ, ಮನಗಳಲ್ಲಿ ನೆಮ್ಮದಿ ನೆಲೆಯೂರಲಿ ಎಂದು ಆಶಿರ್ವಾದ ಮಾಡಿದರು.

ಸಮಾರಂಭದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪಾರಾಯಣ 9 ಗಂಟೆಗೆ ಪಲಿಮಾರು ಮಠಾಧೀಶರಿಂದ ಸೀತಾಂಜನೇಯ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ದೇವರ ಸಂಸ್ಥಾನ ಪೂಜೆ ನಡೆಯಿತು.

ಜಗನ್ನಾಥ ಸಗರ್‌ ಹಾಗೂ ವಿಶ್ವನಾಥ ಕುಲಕರ್ಣಿಯವರಿಗೆ ಪಾರಾಯಣ ಪ್ರವೀಣ ಪುರಸ್ಕಾರ ನೀಡಿ ಗುರುಗಳು ಅನುಗ್ರಹಿಸಿದರು, ಇದೇ ಸಮಾರಂಭದಲ್ಲಿ ಹಿರಿಯ ಪಾರಾಯಣ ಸದಸ್ಯರಾದ ಶಾಮರಾವ ಕುಲ್ಕರ್ಣಿ ಭಂಕುರ (93 ವರ್ಷ, ಪ್ರಶಾಂತ್ ಹನುಮನ ಪಾರಾಯಣ ಸಂಘ), ರಾಘವೇಂದ್ರ ರಾವ್ ದೇಶಮುಖ (87 ವರ್ಷ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಸಂಘ ನ್ಯೂ ರಾಘವೇಂದ್ರ ಕಾಲೋನಿ) ಕಿರಿಯ ಪಾರಾಯಣ ಸದಸ್ಯ ವಿಷ್ಣು ಭಾರದ್ವಾಜ ಶಂಕರ ಕುಲಕರ್ಣಿ ಇವರನ್ನು ಗೌರವಿಸಿದರು.

ಹಂಸನಾಮಕ ಪಾರಯಣ ಸಂಘದ ಅಧ್ಯಕ್ಷರಾದ ಪದ್ಮನಾಭಾಚಾರ್ಯ ಜೋಷಿಯವರು ಸ್ವಾಗತಿಸಿದರು. ಪಾರಾಯಣ ಸಂಘದ ಸದಸ್ಯ ಪತ್ರಕರ್ತ ಶೇಷಮೂರ್ತಿ ಅವಧಾನಿ ಪಾರಾಯಣ ಪ್ರವೀಣ ಪ್ರಶಸ್ತಿಗೆ ಬಾಜನರಾದ ಸಾಧಕರ ಪರಿಚಯ ಮಾಡಿಕೊಟ್ಟರು.

ಪ್ರಶಸ್ತಿ ಸ್ವೀಕರಿಸಿ ಜಗನ್ನಾಥ ಸಗರ್‌, ವಿಶ್ವನಾಥ ಕುಲಕರ್ಣಿ ಮಾತನಾಡುತ್ತ ರಘುನಾಥತೀರ್ಥ ಅಧ್ಯಯನಾಶ್ರಮದ ರೂವಾರಿ ಪಂ. ರಾಮಾಚಾರ್ಯ ಅವಧಾನಿಯವರಿಗೆ ಈ ಪುರಸ್ಕಾರ ಅರ್ಪಿಸೋದಾಗಿ ಹೇಳಿದರು. ಬಿದ್ದಾಪುರದ ಗೋಪಾಲ ಅವರು ಮಾತನಾಡಿದರು. ಆದರ್ಶ ಸಂಸ್ಕೃತ ವಿದ್ಯಾಲಯದ ಪಂ. ಡಾ. ಗುರುಮಧ್ವಾಚಾರ್ಯ ನವಲಿ, ವ್ಯಾಸರಾದ ಸಂತೇಕೆಲ್ಲೂರ್‌ ಉಪಸ್ಥಿತರಿದ್ದರು. ಶ್ರೀ ಸತ್ಯ ಪ್ರಮೋದ ಕೃಪಾಪೋಷಿತ ಪಾರಾಯಣ ಸಂಘ. ರವಿ ಜೋಶಿ ಪ್ರರ್ಥಿಸಿದರು. ಆರ್‌ಕೆ ಕುಲಕರ್ಣಿ ವಂದಿಸಿದರು.

32 ಅಡಿ ಭೀಮಸೇನ ದೇವರ ವಿಗ್ರಹ ಪ್ರತಿಷ್ಠಾಪನೆ ಸಂಕಲ್ಪ: ದಾಸ ಸಾಹಿತ್ಯ ಸಂಶೋಧಕರು, ಚಿಂತಕ ವ್ಯಾಸರಾಜ ಸಂತೇಕೆಲ್ಲೂರ್‌ ಮಾತನಾಡಿ, ಪಲಿಮಾರು ಮಠದ ವಿದ್ಯಾಧೀಶತೀರ್ಥರು ಮಹಾಭಾರತದ ಅತ್ಯಂತ ಮಹತ್ವದ ಹಾಗೂ ಪರಮ ಪವಿತ್ರ ತಾಣವಾಗಿರುವ ಕುರುಕ್ಷೇತ್ರದಲ್ಲಿ ಭೀಮಸೇನ ದೇವರ 32 ಅಡಿ ಎತ್ತರದ ಪುತ್ಥಳಿ ಸ್ಥಾಪನೆ ಸಂಕಲ್ಪ ಕೈಗೊಡಿದ್ದಾರೆ, ಈಗಾಗಲೇ ಕಾರ್ಕಳದಲ್ಲಿ ಇದಕ್ಕಾಗಿ ಶಿಲೆ ಗುರುತಿಸಾಗಿದೆ. ಕೆತ್ತನೆ ಕೆಲಸವೂ ಸಾಗಿದೆ. 

ಭಕ್ತರ ಸಹಾಯ ಸಹಕಾರ ಬೇಕೆಂದು ಕೋರಿದರು. ಈಗಾಗಲೇ ಗಂಗಾ ತೀರದಲ್ಲಿ ಹನುಮ ವಿಗ್ರಹ, ಪಾಜಕದಲ್ಲಿ ಮಧ್ವಾಚಾರ್ಯರ ವಿಗ್ರಹ ಸ್ಥಾಪಿಸುವ ಮೂಲಕ ದಾಖಲೆ ಮಾಡಿರುವ ಪಲಿಮಾರು ಮಠಾಧೀಶರು ಇದೀಗ ಭೀಮಸೇನ ದೇವರ ವಿಗ್ರಹ ಸ್ಥಾಪನೆಗೆ ಮುಂದಾಗಿರೋದರಿಂದ ಭಕ್ತರಲ್ಲಿ ಹೊಸ ಪುಲಕ ಮೂಡಿದೆ ಎಂದರು. ಗುರುಗಳ ಈ ಮಹತ್ತರ ಕೆಲಸಕ್ಕೆ ಭಕ್ತರಾದ ಬೈಚಬಾಳ ಇವರು 1 ಲಕ್ಷ ರು ದಾನ ರೂಪದಲ್ಲಿ ನೀಡೋದಾಗಿ ವಾಗ್ದಾನ ಮಾಡಿದರು.