ಸ್ವಯಂ ಸೇವಕರು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಲಿ: ಎ. ಬಾಬು ನಾಯ್ಕ

| Published : Oct 20 2024, 01:48 AM IST

ಸ್ವಯಂ ಸೇವಕರು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಲಿ: ಎ. ಬಾಬು ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಘಟಕದ ಸ್ವಯಂಸೇವಕರು ಬದ್ಧತೆ, ಸಮಯ ಪ್ರಜ್ಞೆ ರೂಢಿಸಿಕೊಂಡು ಸಮಾಜ ಸೇವೆಯಲ್ಲಿ ಮಾದರಿಯಾಗಿ ತೊಡಗಿಕೊಳ್ಳಬೇಕು ಎಂದು ಧ.ಗ್ರಾ.ಯೋ. ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಹೇಳಿದರು.

ಯಲ್ಲಾಪುರ: ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಸ್ವಯಂಸೇವಕರು ಶಿಸ್ತು ರೂಢಿಸಿಕೊಳ್ಳಬೇಕು. ಜೀವ ರಕ್ಷಣಾ ಕೌಶಲ್ಯ ಎಲ್ಲರಿಗೂ ತಿಳಿದಿರಬೇಕು. ಸಮಯ ಬಂದಾಗ ತಾವು ಕಲಿತ ವಿದ್ಯೆಯನ್ನು ಅನುಷ್ಠಾನಕ್ಕೆ ತರಬೇಕು. ಸ್ವಯಂಸೇವಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು ಎಂದು ಧ.ಗ್ರಾ.ಯೋ. ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಹೇಳಿದರು.

ಶುಕ್ರವಾರ ಪಟ್ಟಣದ ಶ್ರೀವೇದವ್ಯಾಸ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಶೌರ್ಯ ಸ್ವಯಂಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಘಟಕದ ಸ್ವಯಂಸೇವಕರು ಬದ್ಧತೆ, ಸಮಯ ಪ್ರಜ್ಞೆ ರೂಢಿಸಿಕೊಂಡು ಸಮಾಜ ಸೇವೆಯಲ್ಲಿ ಮಾದರಿಯಾಗಿ ತೊಡಗಿಕೊಳ್ಳಬೇಕು. ವಿಪತ್ತು ನಿರ್ವಹಣಾ ಸೇವೆ ಮಾಡುವಾಗ ಮೊದಲು ತಮ್ಮ ರಕ್ಷಣೆಗೆ ಗಮನ ಕೊಡಬೇಕು. ಯೋಧರಂತೆ ಸಮಾಜದಲ್ಲಿ ನೆರವಿಗೆ ನಿಲ್ಲಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎರಡು ಲಕ್ಷ ಮೌಲ್ಯದ ರಕ್ಷಣಾ ಪರಿಕರಗಳನ್ನು ನೀಡಲಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಗ್ನಿಶಾಮಕ, ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಸ್ವಯಂಸೇವಕರು ತಯಾರಾಗಬೇಕು ಎಂದರು.

ಅಗ್ನಿಶಾಮಕ ಠಾಣಾಧಿಕಾರಿ ಸುಧೀರ್ ಕಿಂದಾಳ್ಕರ್ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಉತ್ತಮವಾದ ಕೆಲಸ ಮಾಡುತ್ತಿದೆ. ವಿಪತ್ತು ನಿರ್ವಹಣೆಗೆ ಸ್ವಯಂಸೇವಕರ ತಂಡವನ್ನು ಹುಟ್ಟು ಹಾಕಿದ್ದು ಮಾದರಿ ಕಾರ್ಯವಾಗಿದೆ. ಅಗ್ನಿಶಾಮಕ ದಳದೊಂದಿಗೆ ಸ್ವಯಂಸೇವಕರು ಕೈಜೋಡಿಸಿದಲ್ಲಿ ಅನೇಕ ಅಪಾಯಗಳನ್ನು ತಡೆಯಬಹುದು. ಸ್ವಯಂಸೇವಕರು ಲೈಫ್ ಜಾಕೆಟ್, ಲೈಫ್ ಬಾಯ್ ಪರಿಕರಗಳನ್ನು ಬಳಸಿಕೊಂಡು ರಕ್ಷಣೆಗೆ ಮುಂದಾಗಬೇಕು ಎಂದರು.

ಉಷಾ ಫೈರ್ ಸೇಫ್ಟಿ ಕಂಪನಿಯ ತರಬೇತುದಾರ ಸಂತೋಷ ಪೀಟರ್ ಡಿಸೋಜ ತರಬೇತಿ ನೀಡಿದರು. ವಿಪತ್ತು ಎದುರಿಸಲು ಅಗತ್ಯ ಇರುವ ಪರಿಕರಗಳು, ವಿಪತ್ತು ಸನ್ನದ್ಧತೆ, ಅಪಾಯ ಗುರುತಿಸುವಿಕೆ, ತಕ್ಷಣದ ಸ್ಪಂದನೆಗೆ ಅಗತ್ಯ ಕ್ರಮಗಳು, ಅಗತ್ಯ ಪರಿಕರಗಳು, ಪ್ರಥಮ ಚಿಕಿತ್ಸಾ ವಿಧಾನಗಳು, ಬೆಂಕಿ ಅವಘಡ ನಿರ್ವಹಣಾ ವಿಧಾನಗಳು, ಅಗ್ನಿ ನಂದಕಗಳ ವಿಧಗಳು, ಅಗ್ನಿ ನಂದಕದ ಬಳಕೆ, ರಸ್ತೆ ಅಪಘಾತದಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ, ಆಂಬ್ಯುಲೆನ್ಸ್ ಕರೆಸುವ ವಿಧಾನ, ಗಾಯಾಳುಗಳನ್ನು ಕೊಂಡೊಯ್ಯುವ ವಿಧಾನ ಇತ್ಯಾದಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ, ಅವಘಡ ಸಂಭವಿಸಿದಾಗ ದಿಕ್ಕು ತೋಚದಂತೆ ಕುಟುಂಬದವರು, ಸ್ಥಳೀಯರು ಇದ್ದಾಗ ಕೂಡಲೇ ಶೌರ್ಯ ತಂಡದವರ ನೆರವು ದೊರೆಯುವುದರಿಂದ ಜನರಲ್ಲಿ ಆತಂಕ ಕಡಿಮೆಯಾಗಿ ಮುಂದಿನ ಪರಿಹಾರೋಪಾಯ ಯೋಚಿಸಲು ಸಾಧ್ಯವಾಗುತ್ತದೆ. ಶೌರ್ಯ ತಂಡದ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು.

ತಾಲೂಕಿನ ಮಾವಿನಮನೆ, ಹುಬ್ನಳ್ಳಿ, ಇಡಗುಂದಿ, ಓಣಿಕೇರಿ, ಹಿರೇಹಳ್ಳಿ ಸೇರಿದಂತೆ ಯಲ್ಲಾಪುರ, ಮುಂಡಗೋಡ ಭಾಗದ ಸುಮಾರು ೯೦ ಸ್ವಯಂಸೇವಕರು ತರಬೇತಿ ಪಡೆದರು. ತಾಲೂಕಿನ ಅಗ್ನಿಶಾಮಕ ದಳದ ಸಿಬ್ಬಂದಿ, ತಾಲೂಕು ಯೋಜನಾಧಿಕಾರಿ ಹನುಮಂತ ನಾಯ್ಕ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್, ಶೌರ್ಯ ಘಟಕದ ಮಾಸ್ಟರ್ ಸುಧೀರ್, ಕ್ಯಾಪ್ಟನ್ ಚಂದ್ರಶೇಖರ್, ತರಬೇತುದಾರ ದಿನೇಶ್, ಸಂಯೋಜಕರು, ಘಟಕ ಪ್ರತಿನಿಧಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.