ಮತದಾರರು ಮತದಾನ ಸಾಕ್ಷರತೆ ನಿರೂಪಿಸಲಿ

| Published : Apr 08 2024, 01:07 AM IST

ಸಾರಾಂಶ

ಕ್ಷೇತ್ರದಲ್ಲಿ ೨,೩೪,೨೩೩ ಮತದಾರರಿದ್ದಾರೆ. ಒಟ್ಟು ೨೩ ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ಹಗರಿಬೊಮ್ಮನ: ಹಳ್ಳಿಕ್ಷೇತ್ರದಲ್ಲಿ ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಿ, ಮತದಾನ ಸಾಕ್ಷರತೆ ನಿರೂಪಿಸಬೇಕಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮತದಾನ ಜಾಗೃತಿ ಮೂಡಿಸಲು ನಡೆದ ಬೈಕ್ ರ‍್ಯಾಲಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ೨,೩೪,೨೩೩ ಮತದಾರರಿದ್ದಾರೆ. ಒಟ್ಟು ೨೩ ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಶಾಂತಿಯುತ ಮತದಾನಕ್ಕೆ ಪೂರಕವಾಗಿ ಅರೆ ಮಿಲಿಟರಿ ಪಡೆ ಸಹಾಯ ಪಡೆಯಲಾಗುವುದು. ವಿಜಿಲ್ ಆ್ಯಪ್ ಬಳಸಿ ದೂರು ನೀಡುವವರ ವಿವರವನ್ನು ಗೌಪ್ಯವಾಗಿರಿಸಲಾಗುವುದು. ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯಲು ಸುವಿಧಾ ಆ್ಯಪ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್ ಜಾಗೃತಿ ಬೈಕ್‌ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿ, ಮತದಾನ ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯವಾಗಿದೆ. ಪ್ರಜೆಗಳು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಒದಗಿದ ಅವಕಾಶವಾಗಿದೆ. ಮತದಾನದಿಂದ ಸಂವಿಧಾನ ಬದ್ಧ ಹಕ್ಕು ಚಲಾವಣೆ ಜತೆಗೆ ನಾಡಿನ ಉತ್ತಮ ಪ್ರಜೆಗಳಾಗಿ ರೂಪಗೊಂಡಂತಾಗಲಿದೆ. ಪುರಸಭೆಯಿಂದ ಈಗಾಗಲೆ ಹಲವು ಸುತ್ತಿನ ಮತದಾನ ಜಾಗೃತಿ ನಡೆಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಪಟ್ಟಣದ ಪುರಸಭೆ ಕಚೇರಿಯಲ್ಲಿ ಪ್ರಮುಖ ಬೀದಿಗಳ ಮೂಲಕ ಮತದಾನ ಜಾಗೃತಿ ಬೈಕ್ ರ‍್ಯಾಲಿ ನಡೆಸಿದರು. ಪುರಸಭೆ ಕಂದಾಯ ನಿರೀಕ್ಷಕ ಮಾರೆಣ್ಣ, ವ್ಯವಸ್ಥಾಪಕ ಚಂದ್ರಶೇಖರ, ಸಿಎಒ ಬಸವರಾಜ, ಆರೋಗ್ಯ ನಿರೀಕ್ಷಕಿ ನಾಗರತ್ನ, ಸಿಬ್ಬಂದಿಗಳಾದ ಮಾರುತಿ, ವೀರಣ್ಣ, ಭೀಮಪ್ಪ ಇತರರಿದ್ದರು.