ಮತದಾನ ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಲಿ: ಜಿ.ಆರ್.ಮಂಜುನಾಥ್ ಕರೆ

| Published : Apr 02 2024, 01:00 AM IST

ಮತದಾನ ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಲಿ: ಜಿ.ಆರ್.ಮಂಜುನಾಥ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರಿಗೂ ದೇಶದ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅದರಂತೆ ದೇಶದ ಪ್ರಜಾಪ್ರಭುತ್ವದ ಘನತೆಗಾಗಿ ಮತ ಚಲಾವಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ದೇಶದ ಅಭಿವೃದ್ಧಿ, ಸಮಗ್ರತೆ, ಐಕ್ಯತೆಯನ್ನು ಎತ್ತಿ ಹಿಡಿಯಲು ಕಡ್ಡಾಯವಾಗಿ ಮತ ಚಲಾವಣೆ ಮಾಡಲು ಎಲ್ಲರೂ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಮತದಾನ ಮಾಡುವುದು ನಮ್ಮೆಲ್ಲರ ಮೂಲ ಭೂತ ಕರ್ತವ್ಯವಾಗಬೇಕು ಎಂದು ತಾಪಂ ಇಒ ಜಿ.ಆರ್ ಮಂಜುನಾಥ್ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರೂ ಕೂಡ ಮತದಾನ ಮಾಡಲು ಸಂವಿಧಾನ ನಮಗೆ ಮುಕ್ತ ಅವಕಾಶ ಕಲ್ಪಿಸಿದೆ. ಆದಾಗ್ಯೂ ಹಲವು ಕಾರಣಗಳಿಂದ ಮತದಾನದಿಂದ ದೂರ ಉಳಿಯುವ ನಾಗರಿಕರೂ ನಮ್ಮ ನಡುವೆ ಇದ್ದಾರೆ ಎಂದರು.

ಪ್ರತಿಯೊಬ್ಬರಿಗೂ ದೇಶದ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅದರಂತೆ ದೇಶದ ಪ್ರಜಾಪ್ರಭುತ್ವದ ಘನತೆಗಾಗಿ ಮತ ಚಲಾವಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮನವಿ ಮಾಡಿದರು.

18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಅಂಗವಿಕಲರಿಗೂ ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. 85 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯ ನಾಗರಿಕರೂ ನೋಂದಣಿ ಮಾಡಿಕೊಂಡು ಮನೆಯಿಂದಲೇ ಮತ ಚಲಾವಣೆ ಮಾಡಬಹುದು ಎಂದರು.

ತಾಪಂ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ದೇಶದ ಅಭಿವೃದ್ಧಿ, ಸಮಗ್ರತೆ, ಐಕ್ಯತೆಯನ್ನು ಎತ್ತಿ ಹಿಡಿಯಲು ಕಡ್ಡಾಯವಾಗಿ ಮತ ಚಲಾವಣೆ ಮಾಡಲು ಎಲ್ಲರೂ ಮುಂದಾಗಬೇಕೆಂದು ಹೇಳಿದರು.

ಪ್ರಾಂಶುಪಾಲ ಡಾ.ಬರಗೂರಪ್ಪ ಮಾತನಾಡಿ, ಮತ ಚಲಾವಣೆ ಮಾಡಲು ಯಾವುದೇ ಆಮಿಷಗಳಿಗೆ ಒಳಗಾಗುವುದು ಬೇಡ. ಜಾತಿ, ವರ್ಗ, ಧರ್ಮ, ಲಿಂಗ ತಾರತಮ್ಯ ಮಾಡದೇ, ಹಣದ ರೂಪದ ಹಾಗೂ ವಸ್ತು ರೂಪದ ಆಮಿಷಗಳಿಗೆ ಬಲಿಯಾಗದೇ ಮತ ಚಲಾವಣೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಎಲ್ಲರೂ ಮತದಾನ ಮಾಡುವ ಪ್ರತಿಜ್ಞೆ ಸ್ವೀಕಾರ ಮಾಡಿದರು. ಪಿಡಿಒ ಎನ್. ಸುಧಾ, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಉಮೇಶ್, ಡಾ.ರಮ್ಯಾ ಡಾ.ಶ್ರೀನಿವಾಸ್, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಅಮೃತ್ ರಾಜ್, ಅಂಬರಹಳ್ಳಿ ಸ್ವಾಮಿ, ಪ್ರದೀಪ್, ಭಾವನಾ ಪಾಲ್ಗೊಂಡಿದ್ದರು.