ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಪತ್ರಿಕೋದ್ಯಮ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ‘ಕಾಲೇಜು ರಂಗ’ ಪ್ರಾಯೋಗಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಕೊಪ್ಪಳ: ಪತ್ರಿಕಾರಂಗ ಈಗ ಪತ್ರಿಕೋದ್ಯಮವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಆಧುನಿಕ ಮಾಧ್ಯಮ ಲೋಕದಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪತ್ರಕರ್ತೆ ಹಾಗೂ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಂದಾರ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಪತ್ರಿಕೋದ್ಯಮ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ‘ಕಾಲೇಜು ರಂಗ’ ಪ್ರಾಯೋಗಿಕ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಹಿಳೆ ಅಡುಗೆಮನೆಗೆ ಸೀಮಿತವಾಗಿದ್ದ ಕಾಲ ಈಗಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಮಾನತೆಯ ವಾತಾವರಣ ಹೆಚ್ಚುತ್ತಿದ್ದು, ಮಹಿಳೆಯರು ಯಾವುದೇ ಸಮಸ್ಯೆ ಎದುರಾದರೂ ಧೈರ್ಯದಿಂದ ಮುನ್ನಡೆಯಬೇಕು. ಮಾಧ್ಯಮ ಕ್ಷೇತ್ರದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂದು ಕರೆ ನೀಡಿದರು.

ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಿ: ಹಿರಿಯ ಪತ್ರಕರ್ತ ಪ್ರಮೋದ್ ಕುಲಕರ್ಣಿ ಮಾತನಾಡಿ, ತರಗತಿಯ ಪಾಠಕ್ಕೂ ಕ್ಷೇತ್ರದಲ್ಲಿ ದೊರೆಯುವ ಅನುಭವಕ್ಕೂ ವ್ಯತ್ಯಾಸವಿದೆ. ಹೀಗಾಗಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಪಾಠದ ಜತೆಗೆ ಪ್ರಾಯೋಗಿಕ ಕಲಿಕೆಗೂ ಆದ್ಯತೆ ನೀಡಬೇಕು. ಇಂತಹ ಪ್ರಯತ್ನಗಳಿಂದಲೇ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಪತ್ರಿಕೆ ಹೊರತರಲು ಸಾಧ್ಯವಾಗುತ್ತದೆ ಎಂದರು. ವಿಭಾಗದ ಕಾರ್ಯ ಚಟುವಟಿಕೆಯನ್ನು ಅವರು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಕೆ. ಲಮಾಣಿ ಮಾತನಾಡಿ, ಕಾಲೇಜಿನ ಪತ್ರಿಕೋದ್ಯಮ ವಿಭಾಗ ಇತ್ತೀಚೆಗೆ ಹೆಚ್ಚು ಕ್ರಿಯಾಶೀಲವಾಗಿದೆ. ವಿಭಾಗದ ಚಟುವಟಿಕೆಗೆ ಕಾಲೇಜು ಆಡಳಿತದ ಬೆಂಬಲವಿದೆ. ಶೀಘ್ರದಲ್ಲೇ ಕಾಲೇಜಿನಲ್ಲಿ ಪತ್ರಿಕೋದ್ಯಮ ಪ್ರಯೋಗಾಲಯ ಆರಂಭಿಸಲಾಗುವುದು ಎಂದರು.

ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕಿ ಡಾ. ಶುಭಾ ಮಾತನಾಡಿ, ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಈ ಭಾಗದಲ್ಲಿ ಪತ್ರಿಕೋದ್ಯಮ ಕೋರ್ಸ್ ಆರಂಭವಾಗಿರುವುದು ಶ್ಲಾಘನೀಯ. ಪ್ರತಿ ಕೋರ್ಸ್‌ನಲ್ಲೂ ಕಲಿಕೆ ಇದ್ದರೂ, ಪತ್ರಿಕೋದ್ಯಮದ ಕೌಶಲಗಳನ್ನು ವಿದ್ಯಾರ್ಥಿನಿಯರಿಗೆ ಆರಂಭದಿಂದಲೇ ಪರಿಚಯಿಸುತ್ತಿರುವುದು ಅಭಿನಂದನಾರ್ಹ ಎಂದರು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಬಸವರಾಜ ಕರುಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಯೋಗಿಕ ಪತ್ರಿಕೆಗೆ ‘ಕಾಲೇಜು ರಂಗ’ ಎಂದು ಹೆಸರಿಡಲು ಕಾರಣ ಹಾಗೂ ಅದರ ಹಿನ್ನೆಲೆಯನ್ನು ವಿವರಿಸಿದರು. ಪತ್ರಿಕೆ ಹೊರತರಲು ವಿವಿಧ ಹಂತಗಳಲ್ಲಿ ಸಹಕರಿಸಿದ ಹಿಂದಿನ ಪ್ರಾಚಾರ್ಯರನ್ನು ಸ್ಮರಿಸಿದರು.

ಸೌಭಾಗ್ಯಾ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಿತಾ ಮತ್ತು ಅಕ್ಕಮಹಾದೇವಿ ಪ್ರಾರ್ಥಿಸಿದರು. ಹನುಮಂತಿ ಸ್ವಾಗತಿಸಿದರು. ದುರ್ಗಾ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ರಾಜ್ಮಾ ಪಾಲ್ಗೊಂಡಿದ್ದರು.