ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಮಹಿಳೆಯರನ್ನು ಇಂದಿಗೂ ಎರಡನೇ ದರ್ಜೆಯ ಪ್ರಜೆಯಂತೆ ಸಾಮಾಜಿಕ ವ್ಯವಸ್ಥೆ ಪರಿಗಣಿಸುತ್ತಿರುವುದು ಬದಲಾಗದೇ ಹೋದರೆ ದೇಶದ ಪ್ರಗತಿಗೆ ಮಾರಕ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಸತ್ಯಸಾಯಿ ಮಹಿಳಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಇಂದಿನ ಸ್ತ್ರೀ ಅಭಿಪ್ರಾಯ ಮಂಡನೆಗೆ ಚಾಲನೆ ನೀಡಿ ಮಾತನಾಡಿದರು.ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪ್ರಗತಿಯನ್ನು ಸಾಧಿಸುತ್ತಿದ್ದರೂ ನ್ಯಾಯಬದ್ಧವಾಗಿ ಸಿಗಬೇಕಾದ ಗೌರವ, ಸ್ಥಾನಮಾನ, ಅವಕಾಶಗಳಿಂದ ವಂಚಿತವಾಗುತ್ತಿದ್ದಾಳೆ. ಗ್ರಾಮೀಣ ಮಹಿಳೆ ಪುರುಷನಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದರೂ ಅವಳಿಗೆ ನೀಡುವ ಹಣ ಪುರುಷರಿಗಿಂತ ಕಡಿಮೆ. ಇಂಥ ಹಲವು ತಾರತಮ್ಯಗಳನ್ನು ಇಂದಿನ ಮಹಿಳೆಯರು ಯಾಕೆ ಹೀಗೆ ಎಂದು ಅವಲೋಕಿಸಬೇಕು. ಈ ಅಸಮಾನತೆ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ಇಂದಿಗೂ ಹಾಡು ಹಗಲೇ ಮಹಿಳೆಯರ ಕೊಲೆಗಳಾಗುತ್ತಿವೆ, ಅತ್ಯಾಚಾರಗಳಾಗುತ್ತಿವೆ. ಇಂಥ ವಿಷಮ ಸ್ಥಿತಿಯಲ್ಲಿ ಯುವತಿಯರು ಎಚ್ಚೆತ್ತುಕೊಳ್ಳಬೇಕಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ರಂಗದಲ್ಲಿ ಮಹಿಳೆಗೆ ಸಿಗಬೇಕಾದ ಅವಕಾಶಗಳನ್ನು ಗಟ್ಟಿ ಧ್ವನಿಯಲ್ಲಿ ಕೇಳಬೇಕು ಎಂದು ಹೇಳಿದ ಹಲಗತ್ತಿ, ಮನೆಯಲ್ಲಿ ಮೊದಲು ಲಿಂಗ ಭೇದ ಮಾಡುತ್ತಿರುವುದನ್ನು ವಿರೋಧಿಸಬೇಕು. ಗಂಡಿನಷ್ಟೆ ಹೆಣ್ಣು ಎಲ್ಲ ರೀತಿಯಿಂದಲೂ ಸಮರ್ಥಗಳು ಎಂಬ ವಾತಾವರಣ ಪ್ರತಿ ಕುಟುಂಬದಲ್ಲಿ ಬರುವಂತೆ ಆಗಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಡಾ. ವಿ. ಶಾರದಾ, ಮಹಿಳೆ ತಂತ್ರಜ್ಞಾನದ ಮುನ್ನಡೆಯಿಂದಾಗಿ ಸಾಕಷ್ಟು ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಹೊರಬರಲು ಇಂದಿನ ಸ್ತ್ರೀಯರು ಗಟ್ಟಿಗಿತ್ತಿಯರಾಗಿ ತಮ್ಮ ಸ್ವಂತಿಕೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಡಾ. ಅರುಣಾ ಹಳ್ಳಿಕೇರಿ, ಇಂದಿನ ಮಹಿಳೆ ಅತ್ಯಂತ ತಾಳ್ಮೆಯಿಂದ ತನಗೆ ಬಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಮ್ಮ ಸಮಾಜದಲ್ಲಿ ಕುಟುಂಬ ವ್ಯವಸ್ಥೆ ಹಾಳಾಗುತ್ತದೆ ಎಂದು ಹೇಳಿದರು.ಶಾರದಾ ಕೌದಿ, ಜಿ.ಎಂ. ಕೋಟಿಗೌಡರ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾಲೇಜಿನ ಪ್ರಾಚಾರ್ಯರಾದ ಅಶ್ವಿನಿ ಇಂಚಲ ಅಧ್ಯಕ್ಷತೆ ವಹಿಸಿದ್ದರು. ಡಾ. ಶೈಲಜಾ ಅಮರಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಭಾವಿಕಟ್ಟಿ ನಿರೂಪಿಸಿದರು. ನಿರ್ಮಲಾ ಚಿಗಟೇರಿ, ಬೇವಿನಕಟ್ಟಿ ಇದ್ದರು.