ಗದಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಕೇವಲ ಗೃಹಕೃತ್ಯಕ್ಕೆ ಸೀಮಿತವಾಗದೆ, ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದು ಅನಿವಾರ್ಯವಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಅವರಲ್ಲಿನ ಸುಪ್ತ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಕಲ್ಪಿಸಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ತಿಳಿಸಿದರು.

ನಗರದ ಹುಡ್ಕೋ ಕಾಲನಿಯ ಶ್ರೀಗುರು ಸಚ್ಚಿದಾನಂದ ಮಠದ ಆವರಣದಲ್ಲಿ ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ಉಚಿತ ಬ್ಯಾಗ್ ತಯಾರಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಶಕ್ತಿ ಹೊಂದಬೇಕು ಎನ್ನುವುದು ಸಚಿವ ಎಚ್.ಕೆ. ಪಾಟೀಲ ಅವರ ಆಶಯವಾಗಿದೆ. ಹೀಗಾಗಿ ಸರ್ಕಾರದ ವಿಶೇಷ ಅನುದಾನದಡಿ ಸಿಗಲಿರುವ ಹೈಟೆಕ್ ಯಂತ್ರೋಪಕರಣಗಳು, ಸಬ್ಸಿಡಿ ಸಾಲ ಸೌಲಭ್ಯಗಳು, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ ಸೇರಿದಂತೆ ಎಲ್ಲ ರೀತಿಯ ರಿಯಾಯಿತಿ ಆಧಾರಿತ ಸರ್ಕಾರಿ ಸೌಲಭ್ಯಗಳನ್ನು ಜಿಲ್ಲೆಯ ಶ್ರಮಿಕ ಮಹಿಳೆಯರಿಗೆ ತಲುಪಿಸಲು ಬದ್ಧರಾಗಿರುವುದಾಗಿ ಎಂದು ಭರವಸೆ ನೀಡಿದರು.ರಾಷ್ಟ್ರ ಪ್ರಶಸ್ತಿ ವಿಜೇತ, ನಿವೃತ್ತ ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಉದ್ಯೋಗದಾತರಾಗಿ ಬೆಳೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ದಾರಿದೀಪ ಸಂಸ್ಥೆಯ ಅಧ್ಯಕ್ಷೆ ಶಕುಂತಲಾ ಆರ್. ಮುಳಗುಂದ ಮಾತನಾಡಿ, ಮಹಿಳೆಯರನ್ನು ಉದ್ಯಮಶೀಲರನ್ನಾಗಿ ಮಾಡಲು ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ. ಇಂತಹ ಪ್ರಾಯೋಗಿಕ ಶಿಬಿರಗಳು ಮಹಿಳೆಯರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುತ್ತವೆ ಎಂದರು.ಕಾಂಗ್ರೆಸ್ ಯುವ ನಾಯಕ ರವಿಕುಮಾರ ರೆಡ್ಡಿ, ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ ಮಾತನಾಡಿದರು.ಈ ವೇಳೆ ಹಿರಿಯರಾದ ಸಿಕಂದರ ಬಡೆಖಾನ, ಜ್ಯೋತಿ ದೇಸಾಯಿಗೌಡರ, ದೀಪಾ ಉಘಲಾಟ್, ಸುಪ್ರಿಯಾ ಅಯ್ಯನಗೌಡರ, ರಾಜೇಶ್ವರಿ ಕುಲಕರ್ಣಿ, ತನುಜಾ ವರಣೇಕರ್, ಪ್ರತಿಭಾ ಇನಾಮತಿ, ಸುಜಾತಾ ಅಂಬಕ್ಕಿ, ಆಶಾ ಕಂಠಿ, ನಿರ್ಮಲಾ ಪೂಜಾರ, ಮಂಜುಳಾ ನವಲಗುಂದ, ರಾಜೇಶ್ವರಿ ಕೋಕಲೆ, ಶಿಲ್ಪ ಕಲಾಲ್, ಪೂರ್ಣಿಮಾ ಹುರುಳಿ, ನಾಗರಾಜ ಗಾವಡಿ ಹಾಗೂ ಸಂಸ್ಥೆಯ ಸದಸ್ಯರು ಇದ್ದರು.