ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಹಿಳೆ ಶಿಕ್ಷಣವಂತಳಾದಾಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಾನ ತನ್ನಷ್ಟಕ್ಕೆ ತಾನೆ ಅರಸಿ ಬರುತ್ತದೆಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಗೆ ಭೂಮಿ ತೂಕದ ಅರ್ಥವಿದೆ. ಸಹಜತೆಯಲ್ಲಿ ಆಕರ್ಷಣೆ, ಸೌಂದರ್ಯ, ಸೊಗಸಿರುತ್ತದೆ. ಮಹಿಳೆ ಸಾಂಸ್ಕೃತಿಕ, ಸಂಘಟನಾತ್ಮಕವಾಗಿ ಬೆಳೆಯಬೇಕು. ಮಹಿಳಾ ಚಳುವಳಿಗಳು ಹೇಗೆ ಹುಟ್ಟಿಕೊಂಡವು ಎನ್ನುವ ಬಗ್ಗೆಯೂ ನೀವುಗಳು ಮಾಹಿತಿ ತಿಳಿದುಕೊಂಡಿರಬೇಕು. ಸಾಧನೆಗೆ ಪೂರಕವಾದ ವಾತಾವರಣ ಸೃಷ್ಠಿಯಾಗಬೇಕು. ಹೆಣ್ಣಾದರೆ ಮಾತ್ರ ಶರಣಾಗಲು ಸಾಧ್ಯ ಎಂದು ಹೇಳಿದರು.ಕನ್ನಡದಲ್ಲಿ ಮಹಿಳಾ ಸಾಹಿತ್ಯ ಸೃಷ್ಠಿಯಾಗಿದೆ. ಚಳವಳಿ ಎಂದರೆ ಕೇವಲ ವಿರೋಧಿಸುವುದಲ್ಲ. ಸಾಮರಸ್ಯ, ಸುಧಾರಣೆ, ಪ್ರೀತಿಯಿರುತ್ತದೆ. ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎನ್ನುವುದನ್ನು ಬುದ್ಧ ತೋರಿಸಿದ್ದಾನೆ. ಜಗದ, ಮನಸ್ಸಿನ ಬೆಳಕು ಮಹಿಳೆ. ಶಿಕ್ಷಣವೆಂದರೆ ಕೇವಲ ಅಕ್ಷರ ತಿಳಿವಳಿಕೆಯಲ್ಲ. ಜೀವನದಲ್ಲಿನ ಅನುಭವ ಕೂಡ ಶಿಕ್ಷಣವೆ. ಕೀಳರಿಮೆ, ಹಿಂಜರಿಕೆಯನ್ನು ಬಿಟ್ಟು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಜನಪದರಲ್ಲಿ ಸ್ತ್ರೀಗೆ ಗೌರವವಿದೆ. ಮಹಿಳೆ-ಪುರುಷ, ಜಾತಿ-ಧರ್ಮದ ನಡುವೆ ಒಡಕಿರುವ ಇಂದಿನ ಕಾಲಘಟ್ಟದಲ್ಲಿ ಸೌಹಾರ್ಧ, ಸಹಬಾಳ್ವೆಯಿಂದ ಇರುವುದನ್ನು ಕಲಿತಾಗ ಮಾತ್ರ ಎಲ್ಲಿಯೂ ಸಂಘರ್ಷಕ್ಕೆ ಜಾಗವಿರುವುದಿಲ್ಲ. ವಾಸ್ತವ ಪ್ರ್ರಜ್ಞೆಯ ಸಂಕೇತವಾಗಿರುವ ಮಹಿಳೆಯರು ಸೂಕ್ಷ್ಮ ಸಂವೇದನೆಗಳನ್ನು ಬೆಳೆಸಿಕೊಳ್ಳುವಂತೆ ಡಾ.ಜೆ.ಕರಿಯಪ್ಪ ಮಾಳಿಗೆ ಕರೆ ನೀಡಿದರು.
ಖ್ಯಾತ ವಿಮರ್ಶಕರಾದ ತಾರಿಣಿ ಶುಭದಾಯಿನಿ ಸ್ತ್ರೀ ಬರವಣಿಗೆಯಲ್ಲಿನ ಕುಶಲತೆಗಳು ಎಂಬ ವಿಷಯ ಕುರಿತು ಮಾತನಾಡಿದರು. ಸೃಜನಶೀಲತೆ ಯಾರ ಸ್ವತ್ತಲ್ಲ. ಅಕ್ಕಮಹಾದೇವಿ ಮೊದಲ ಮಹಿಳಾ ಕವಿ, ನಂತರದಲ್ಲಿ ಶರಣೆಯರು, ವಚನಗಾರ್ತಿಯರು ಬರುತ್ತಾರೆ. ಅಭಿವ್ಯಕ್ತಿಯಲ್ಲಿಯೂ ಅನುಭವದ ಸಂವೇದನೆಯ ಸೆಳಹುಗಳಿರುತ್ತವೆ. 19ನೇ ಶತಮಾನದಲ್ಲಿ ಸ್ತ್ರೀಗೆ ಶಿಕ್ಷಣ ಕಠಿಣವಾಗಿದ್ದರಿಂದ ಮನೆಯಲ್ಲಿ ಅನೇಕ ಕಟ್ಟುಪಾಡುಗಳನ್ನು ಪಾಲಿಸುವುದೇ ದೊಡ್ಡ ಸವಾಲಾಗಿತ್ತು. ಕೀರ್ತನಕಾರರು ಮೌಖಿಕ ಪರಂಪರೆಯವರು. ಮೌಖಿಕ ಪರಂಪರೆಯನ್ನು ಒಗ್ಗಿಸಿಕೊಳ್ಳುವುದು ಒಂದು ಕೌಶಲ್ಯ ಎಂದರು.
ಕವಿ ಜಬೀವುಲ್ಲಾ ಎಂ.ಅಸದ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕೆ.ನಿರ್ಮಲ ಮರಡಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ದೀಪಿಕಾ ಬಾಬು, ಸಹ ಕಾರ್ಯದರ್ಶಿ ಡಾ.ಚಾಂದಿನಿಖಾಲಿದ್, ಖಜಾಂಚಿ ಮೀರಾ ನಾಡಿಗ್, ಡಿ.ಶಬ್ರಿನಾ ಮಹಮದ್ ಆಲಿ ಇವರುಗಳು ವೇದಿಕೆಯಲ್ಲಿದ್ದರು. ಕೆ.ಸಿ.ಶಿಲ್ಪಾ ಜಗದೀಶ್, ಶಕುಂತಲಾ ಪಿ.ಆಚಾರ್ ಸೇರಿದಂತೆ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ 60ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.