ಸಾಹಿತ್ಯ ಕೃಷಿಯಲ್ಲೂ ಮಹಿಳೆಯರು ಬೆಳೆಯಲಿ

| Published : Feb 13 2025, 12:46 AM IST

ಸಾರಾಂಶ

ಪ್ರಾಚೀನ ಕಾಲದಿಂದ ಭಾರತದ ವಿವಿಧ ಭಾಷೆಗಳಲ್ಲಿ ರಚನೆಯಾದ ಹಲವು ಮಹಾನ್ ಸಾಹಿತ್ಯ ಕೃತಿಗಳಲ್ಲಿ ಮಹಿಳಾ ಸಾಹಿತಿಗಳ ಕೊಡುಗೆ ಅಪಾರ

ರೋಣ: ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿರಬೇಕು. ಈ ದಿಶೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳೆಯುವ ಮೂಲಕ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕು ಎಂದು ಕದಳಿ ಮಹಿಳಾ ವೇದಿಕೆ ರೋಣ ತಾಲೂಕು ಅಧ್ಯಕ್ಷೆ ಶಶಿಕಲಾ ಎಸ್. ಪಾಟೀಲ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಗದಗ ಆಶ್ರಯದಲ್ಲಿ ಜರುಗಿದ ರೋಣ ತಾಲೂಕು ಕದಳಿ ಮಹಿಳಾ ಘಟಕ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಚೀನ ಕಾಲದಿಂದ ಭಾರತದ ವಿವಿಧ ಭಾಷೆಗಳಲ್ಲಿ ರಚನೆಯಾದ ಹಲವು ಮಹಾನ್ ಸಾಹಿತ್ಯ ಕೃತಿಗಳಲ್ಲಿ ಮಹಿಳಾ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಪ್ರಾಚೀನ ಭಾರತದಲ್ಲಿ ಗಾರ್ಘೆ, ಮೈತ್ರಾಯಿ, ವಚನ ಸಾಹಿತ್ಯದ ಕಾಲದಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಅತ್ತಿಮಬ್ಬೆಯಂತಹ ಮಹಾನ್ ಮಹಿಳಾ ಸಾಹಿತಿಗಳು ನಾಡಿನ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಹಳೆಗನ್ನಡ, ಮಧ್ಯಗನ್ನಡ ಮತ್ತು ನವಯುಗ ಕನ್ನಡದ ಹಲವು ಪ್ರಮುಖ ಕೃತಿಗಳಲ್ಲಿ ಮಹಿಳೆಯರ ಅಪರಿಮಿತ ಕೊಡುಗೆ ಗುರುತಿಸಬಹುದಾಗಿದ್ದು, ಮಹಿಳೆಯರಿಗೆ ಸೂಕ್ತ ಶಿಕ್ಷಣ ಮತ್ತು ಮಾರ್ಗದರ್ಶನ ಸರಿಯಾಗಿ ದೊರಕಿದಲ್ಲಿ ಅಮೂಲ್ಯವಾದ ಸಾಹಿತ್ಯ ಕೃತಿಗಳು ಮಹಿಳೆಯರಿಂದ ರಚನೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಪುರಸಭೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ಶರಣ ಸಾಹಿತ್ಯ ಎಂಬುದು ಸಮಾಜದ ಅಂಕುಡೊಂಕು ತಿದ್ದುವ ಸರಳ ಮಂತ್ರವಾಗಿದೆ. ಓದುಗರು ಪ್ರತಿನಿತ್ಯ ಶರಣ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಮಾಜಕ್ಕೆ ಶರಣ ಸಾಹಿತ್ಯ ನೀಡಿದ ಅನುಪಮ ಸಲಹೆ ಸೂಚನೆಗಳನ್ನು ತಿಳಿಸಿ ಹೇಳುವ ಕಾರ್ಯ ಜರುಗಬೇಕು ಎಂದರು.ಹಿರಿಯ ಸಾಹಿತಿ ವಿ.ಕೆ. ಪಾಟೀ, ಕದಳಿ ಮಹಿಳಾ ವೇದಿಕೆ ಜಿಲ್ಲಾ ಅಧ್ಯಕ್ಷೆ ಸುಧಾ ಹುಚ್ಚನ್ನವರ ಮಾತನಾಡಿದರು.

ಪದಾಧಿಕಾರಿಗಳಿಗೆ ಸೇವಾ ದೀಕ್ಷೆ: ಕದಳಿ ಮಹಿಳಾ ವೇದಿಕೆಯ ರೋಣ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಶಶಿಕಲಾ ಪಾಟೀಲ, ಉಪಾಧ್ಯಕ್ಷರಾಗಿ ಲಕ್ಷ್ಮೀ ಕೆಂಚರೆಡ್ಡಿ ಹಾಗೂ ಲಕ್ಷ್ಮೀ ಗಡಗಿ, ಪ್ರಧಾನ ಕಾರ್ಯದರ್ಶಿಯಾಗಿ ಅನ್ನಪೂರ್ಣ ಹೂಗಾರ, ಕಾರ್ಯದರ್ಶಿಯಾಗಿ ಛಾಯಾ ಅಚ್ಚನಗೌಡ್ರ, ಖಜಾಂಚಿಯಾಗಿ ವೀಣಾ ಹಾಲಣ್ಣವರ, ಶರಣ ಸಾಹಿತ್ಯ ಪರಿಷತ್ ರೋಣ ತಾಲೂಕಿನ ಅಧ್ಯಕ್ಷರಾಗಿ ಪಂಚಯ್ಯ ಹಿರೇಮಠ, ಉಪಾಧ್ಯಕ್ಷರಾಗಿ ವಿರೂಪಾಕ್ಷಗೌಡ ದೇಸಾಯಿಗೌಡ್ರ ಮತ್ತು ಮಹಾದೇವಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಪಾಟೀಲ, ಸಂಘಟನಾ ಕಾರ್ಯದರ್ಶಿಯಾಗಿ ಶರಣಪ್ಪ ಪೂಜಾರ, ಖಜಾಂಚಿಯಾಗಿ ಮಲ್ಲನಗೌಡ ಪಾಟೀಲ ಅವರು ಸೇವಾ ದೀಕ್ಷೆ ತೆಗೆದುಕೊಂಡರು. ಪ್ರಮಾಣ ವಚನವನ್ನು ವೇದಿಕೆ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚನ್ನವರ ಬೋಧಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ರೋಣ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ವಹಿಸಿದ್ದರು, ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕಾಧ್ಯಕ್ಷ ರಮಾಕಾಂತ ಕಮತಗಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಂಚಯ್ಯ ಹಿರೇಮಠ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.