ವುಮನ್ ಮೀಡಿಯಾ ಕ್ಲಬ್ ಸಮಾಜಕ್ಕೆ ಕೊಡುಗೆ ನೀಡಲಿ

| Published : Jan 22 2025, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವುಮನ್ ಮೀಡಿಯಾ ಕ್ಲಬ್ ಮಹಿಳೆಯರಿಗೆ ಮಾತ್ರವಲ್ಲ, ಮಕ್ಕಳಿಗೂ ಶಿಸ್ತಿನ ಹಾದಿಯಲ್ಲಿ ಪ್ರೇರಣೆ ನೀಡಲು ಕಾರ್ಯನಿರ್ವಹಿಸಬೇಕು. ದೌರ್ಜನ್ಯದ ಬಗ್ಗೆ ಅರಿವು ಮೂಡಿಸಲು, ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆಯ ಕಾರ್ಯಗಳು, ಹಾಗೂ ಶಿಷ್ಟಾಚಾರದ ಕುರಿತ ಕಾರ್ಯಾಗಾರ ಆಯೋಜಿಸಬೇಕು ಎಂದು ಕೆನಡಾದ ಟೊರೊಂಟೋದ ಬಿ.ವಿ ನಾಗ್ ಕಮ್ಯುನಿಕೇಶನ್ಸ್‌ ಅಧ್ಯಕ್ಷ ಬಿ.ವಿ.ನಾಗರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರವುಮನ್ ಮೀಡಿಯಾ ಕ್ಲಬ್ ಮಹಿಳೆಯರಿಗೆ ಮಾತ್ರವಲ್ಲ, ಮಕ್ಕಳಿಗೂ ಶಿಸ್ತಿನ ಹಾದಿಯಲ್ಲಿ ಪ್ರೇರಣೆ ನೀಡಲು ಕಾರ್ಯನಿರ್ವಹಿಸಬೇಕು. ದೌರ್ಜನ್ಯದ ಬಗ್ಗೆ ಅರಿವು ಮೂಡಿಸಲು, ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆಯ ಕಾರ್ಯಗಳು, ಹಾಗೂ ಶಿಷ್ಟಾಚಾರದ ಕುರಿತ ಕಾರ್ಯಾಗಾರ ಆಯೋಜಿಸಬೇಕು ಎಂದು ಕೆನಡಾದ ಟೊರೊಂಟೋದ ಬಿ.ವಿ ನಾಗ್ ಕಮ್ಯುನಿಕೇಶನ್ಸ್‌ ಅಧ್ಯಕ್ಷ ಬಿ.ವಿ.ನಾಗರಾಜು ಹೇಳಿದರು.

ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ವುಮೆನ್ ಮೀಡಿಯಾ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಾಗಾರಗಳಿಂದ ಸಮಾಜದಲ್ಲಿ ಮಾನವೀಯತೆ ಮತ್ತು ಸಮಾನತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮಗಳು ಹೆಣ್ಣುಮಕ್ಕಳಿಗೆ ದಾರಿ ದೀಪವಾಗಿ, ತಮ್ಮ ಜೀವನವನ್ನು ಸದೃಢವಾಗಿ ರೂಪಿಸಲು ಸಹಾಯವಾಗಬೇಕು ಎಂದು ಹೇಳಿದರು.ಕೆನಡಾದ ಟೊರೊಂಟೋದ ಸಂವಹನ ತಜ್ಞೆ ಗೀತಾ ನಾಗರಾಜು ಮಾತನಾಡಿ, ವುಮನ್ ಮೀಡಿಯಾ ಕ್ಲಬ್ ಕೇವಲ ವಿಭಾಗ ಮತ್ತು ವಿಶ್ವವಿದ್ಯಾಲಯಕ್ಕೆ ಸೀಮಿತವಾಗದೇ, ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ವುಮನ್ ಮೀಡಿಯಾ ಕ್ಲಬ್ ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ಅರಿತು, ಸಮಾಜದಲ್ಲಿ ಸ್ವತಂತ್ರವಾಗಿ ಮತ್ತು ಯಶಸ್ವಿಯಾಗಿ ಬದುಕಲು ಸಹಾಯ ಮಾಡಬೇಕು. ತರಬೇತಿಗಳು, ಕಾರ್ಯಾಗಾರಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಅವರು ಸ್ವಚ್ಛತೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಮ್ಮ ಕುಟುಂಬ ಹಾಗೂ ಸಮುದಾಯದಲ್ಲಿ ದಾರಿದೀಪವಾಗಿ ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ, ಆಧುನಿಕ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ, ಪ್ರತಿಯೊಬ್ಬ ವಿದ್ಯಾರ್ಥಿನಿಯು ಪ್ರಪಂಚವನ್ನು ವಿಸ್ತೃತವಾಗಿ ಅರಿಯಲು ಯತ್ನಿಸಬೇಕು. ಕೇವಲ ಒಂದೇ ವಿಷಯಕ್ಕೆ ಸೀಮಿತವಾಗದೇ, ಬೇರೆ ಬೇರೆ ವಿಷಯಗಳಲ್ಲಿ ಜ್ಞಾನ ಸಂಪಾದಿಸುವುದು ಅತ್ಯಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.