ಸಾರಾಂಶ
ನರಗುಂದ: ಗ್ರಾಮೀಣ ಪ್ರದೇಶಗಳ ಮತದಾರರಲ್ಲಿ ಕಡ್ಡಾಯ ಮತದಾನದ ಬಗ್ಗೆ ಮಹಿಳಾ ಸ್ವಸಹಾಯ ಸಂಘಗಳು ಹೆಚ್ಚು ಜಾಗೃತಿ ಮೂಡಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಜಿಪಂ ಉಪಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ.ಬಿ. ದೇವರಮನಿ ಹೇಳಿದರು.
ಅವರು ಪಟ್ಟಣದಲ್ಲಿ ಜಿಲ್ಲಾ ಮತ್ತು ತಾಲೂಕು ಚುನಾವಣೆ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿಲ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸಂಘಟನೆಗಳು ಪ್ರಬಲವಾಗಿವೆ, ಗ್ರಾಮೀಣ ಪ್ರದೇಶದ ಜನರ ಜತೆ ನಿರಂತರವಾಗಿ ಒಡನಾಟ ಇಟ್ಟುಕೊಂಡಿರುವ ಮಹಿಳಾ ಸಂಘಟನೆ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ವಲಸೆ ಹೋಗಿದ್ದರೇ ಅಂತಹ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮತದಾನ ದಿನದಂದು ಕರೆ ತರುವ ಮಾಡಬೇಕು ಎಂದರು.ಜಿಪಂ ಯುವಜನ ನಿರ್ದೇಶಕ ಜಗದೇವ.ಬಿ. ಮಾತನಾಡಿ, ಮತದಾನದ ದಿನ ರಜೆ ಸಿಕ್ತು ಅಂತ ಅನ್ಯ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬೇಡಿ. ದೇಶದ ಭದ್ರತೆಗಾಗಿ ಮತದಾನ ಎಂಬ ಹಕ್ಕನ್ನು ನಮಗೆ ನೀಡಿದೆ. ನಮ್ಮ ಹಕ್ಕನ್ನು ಮತದಾನ ದಿನ ನಾವು ಮರೆತರೆ ನಮ್ಮ ಹಕ್ಕಿಗೆ ನಾವು ಮಾಡಿದ ಅವಮಾನ ಎಂಬಂತೆ. ಹೀಗಾಗಿ ತಪ್ಪದೇ ಮತದಾನ ಮಾಡಿ ನಮ್ಮ ಗೌರವ ಕಾಪಾಡಿಕೊಳ್ಳುವುದರ ಜತೆಗೆ ದೇಶದ ಗೌರವ ಎತ್ತಿ ಹಿಡಿಯೋಣ ಎಂದು ಕರೆ ನೀಡಿದರು.
ತಾಪಂ ಆಡಳಿತಾಧಿಕಾರಿ ಡಾ. ಎಚ್.ಬಿ. ಹುಲಗಣ್ಣವರ ಮಾತನಾಡಿ, ಎಲ್ಲ ದಾನಕ್ಕಿಂತ ಮತದಾನ ಶ್ರೇಷ್ಟವಾಗಿದ್ದು. ಮತದಾನ ದಿನ ಬದ್ಧತೆ, ಕಾಳಜಿಯಿಂದ ಮತದಾನ ಕಾರ್ಯ ಸುಲಲಿತವಾಗಿ ನಡೆಯುವಂತಾಗಬೇಕು. ಇದಕ್ಕೆ ನಮ್ಮೆಲ್ಲ ಸಿಬ್ಬಂದ ವರ್ಗ ಸಹಕಾರ ಅವಶ್ಯಕ ಅಂತ ತಿಳಿಸಿದರು.ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದರ ಮಾತನಾಡಿ, ಕಡ್ಡಾಯ ಮತದಾನಕ್ಕೆ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಿರಂತರವಾಗಿ ತರಹೇವಾರಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಸಾರ್ವಜನಿಕರು ಮತದಾನದಿಂದ ತಪ್ಪಿಸಿಕೊಳ್ಳದೇ ತಮ್ಮ ಹಕ್ಕನ್ನು ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆಗೊಳಿಸಬೇಕೆಂದು ಹೇಳಿದರು.
ಪುರಸಭೆ ಮುಂಭಾಗದಲ್ಲಿ ಕಡ್ಡಾಯ ಮತದಾನ ಜಾಗೃತಿ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಬಣ್ಣ-ಬಣ್ಣದ ವಿಶೇಷ ಅಲಂಕಾರವುಳ್ಳ ತರಹೇವಾರಿ ರಂಗೋಲಿ ಬಿಡಿಸಿ ಗಮನ ಸೆಳೆದರು. ಅಲ್ಲದೆ ಜಾಥಾ ಸಾಗುವ ಮಾರ್ಗ ಮಧ್ಯ ಮಾರ್ಕೆಟ್ ಸರ್ಕಲ್, ಬಸವೇಶ್ವರ ಸರ್ಕಲ್ ಮುಂಭಾಗದಲ್ಲಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸುವ ರಂಗೋಲಿ ಬಿಡಿಸಲಾಗಿತ್ತು.ಆ ನಂತರ ಪುರಸಭೆ ಮುಖ್ಯ ಕಚೇರಿಯಿಂದ ಮತದಾನ ಜಾಗೃತಿ ಜಾಥಾ ಆರಂಭವಾಗಿ ಪಟ್ಟಣದ ಟಿಎಂಸಿ ರೋಡ, ಮಾರ್ಕೆಟ್ ಮುಖ್ಯ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಸಂಚರಿಸಿ ನಗರದ ಶಿವಾಜಿ ಸರ್ಕಲ್ ನಲ್ಲಿ ಮತದಾನ ಕುರಿತಾದ ವಿಶೇಷ ಘೋಷಣೆ ಕೂಗುತ್ತಾ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ತಹಸೀಲ್ದಾರ ಶ್ರೀಶೈಲ ತಳವಾರ, ಪುರಸಭೆ ಮುಖ್ಯ ಅಧಿಕಾರಿ ಅಮಿತ್ ತಾರದಾಳೆ, ಸಿಡಿಪಿಓ ಪ್ರದೀಪ ನಾಡಿಗೇರ, ಟಿಎಚ್ಓ ರೇಣುಕಾ, ಕೆ.ಎಸ್.ಹಾದಿಮನಿ, ಸಂತೋಷಕುಮಾರ್ ಪಾಟೀಲ, ಎಸ್.ಎಸ್ ಬ್ಯಾಳಿ, ಎನ್.ಆರ್. ನಿಡಗುಂದಿ, ಬಿ.ಆರ್.ಮಜ್ಜಗಿ, ಎನ್.ಆರ್.ಎಲ್.ಎಂ ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿ ಇದ್ದರು.