ಮಹಿಳೆಯರು ಕಾನೂನುಗಳ ಸದುಪಯೋಗ ಪಡೆದುಕೊಳ್ಳಲಿ: ನ್ಯಾ. ಮಹಾಂತೇಶ ದರಗದ

| Published : Nov 27 2024, 01:05 AM IST

ಮಹಿಳೆಯರು ಕಾನೂನುಗಳ ಸದುಪಯೋಗ ಪಡೆದುಕೊಳ್ಳಲಿ: ನ್ಯಾ. ಮಹಾಂತೇಶ ದರಗದ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಕಾನೂನುಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು.

ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಭಾರತದಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಕಾನೂನುಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಸಂಗಪ್ಪ ದರಗದ ಹೇಳಿದರು.ನಗರದ ಪ್ಯಾಟಿ ಈಶ್ವರ ದೇವಸ್ಥಾನದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಆರ್ಥಿಕ, ಸಾಮಾಜಿಕ, ದೈಹಿಕವಾಗಿ ಸಬಲರಾಗಬೇಕು. ಯಾವುದೇ ದೌರ್ಜನ್ಯ ಜರುಗಿದಲ್ಲಿ ಹಕ್ಕು ಚಲಾಯಿಸುವ ಹಾಗೂ ದೌರ್ಜನ್ಯ ಖಂಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಹಕ್ಕು ಮಹಿಳೆಗೆ ಇದೆ. ಕಾನೂನಿನ ಮುಂದೆ ಎಲ್ಲರೂ ಸಮಾನವಿದ್ದರೂ ಸಹ ಕೆಲವು ವಿಷಯಗಳಲ್ಲಿ ಹಿಂದೆ ಇರುವರು. ಮುಂದೆ ಉದೋಗ್ಯಗಳಲ್ಲಿ ಶೇ.80ರಷ್ಟು ಮಹಿಳೆಯರೇ ಇರಲಿದ್ದಾರೆ. ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವಾದಲ್ಲಿ ಅದನ್ನು ಕಮಿಟಿ ಮುಂದೆ ದೂರು ನೀಡಬಹುದಾಗಿದೆ ಎಂದು ತಿಳಿಸಿದ ಅವರು, ವಿವಿಧ ಮಹಿಳಾ ಕಾನೂನು ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಮಹಿಳೆಯರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಹಕ್ಕು, ಆಸ್ತಿಯ ಹಕ್ಕು ನೀಡಬೇಕು ಎಂದು ಆಶಯ ಹೊಂದಿದ್ದರು. ಮಹಿಳೆಯರ ಮೇಲೆ ದೌರ್ಜನ್ಯ ಇನ್ನೂ ನಡೆಯುತ್ತಿದ್ದು, ಅದರ ವಿರುದ್ಧ ಧ್ವನಿ ಎತ್ತುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ್ ಮಾತನಾಡಿ, ಮಹಿಳೆಯರು ಇಲಾಖೆಯ ವಿವಿಧ ಸೌಲಭ್ಯಗಳು ಮತ್ತು ತಮ್ಮ ಪರವಾದ ಕಾನೂನುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಕನಿಷ್ಠ ಕಾನೂನಿನ ಅರಿವು ಅವಶ್ಯವಾಗಿರಬೇಕು ಎಂದರು.ಜಿಲ್ಲಾ ಮಕ್ಕಳ ರಕ್ಷಣಾ ಘಕಟದ ಎಲ್.ಪಿ.ಓ ಶಿವಲೀಲಾ ಹೊನ್ನೂರು ವಿಶೇಷ ಉಪನ್ಯಾಸ ನೀಡಿ, ಹೆಣ್ಣು ಮಗು ಹೆಚ್ಚು ಜಾಗೃತವಾಗಿರಬೇಕು. ಇದರಲ್ಲಿ ಕುಟುಂಬದ ಪಾತ್ರ ಅತಿ ಮುಖ್ಯವಾಗಿದೆ. ಕೌಟುಂಬಿಕ ಕಲಹ, ಯಾವುದೇ ಜಾತಿ, ಲಿಂಗ, ವರ್ಣಗಳ ಆಧಾರದ ಮೇಲೆ ಮಹಿಳೆಯರನ್ನು ಬೇಧ-ಭಾವ ಮಾಡಬಾರದು. ಹೆಣ್ಣು ಮಗುವಿನ ರಕ್ಷಣೆ ನಮ್ಮೆಲ್ಲರ ಹೊಣೆ, ಮಹಿಳಾ ಸಬಲೀಕರಣ ಹೆಚ್ಚಿನ ರೀತಿಯಲ್ಲಿ ಆಗಬೇಕು ಎಂದು ಹೇಳಿದರು.

ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ದತ್ತು ಸ್ವೀಕಾರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಈ ಸಂದರ್ಭ ವಕೀಲರಾದ ಹನುಮಂತ ರಾವ್, ಹರೀಶ್ ಹಾಗೂ ಟಿ.ಎಸ್. ವಿರಾಪುರ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ ಸೇರಿದಂತೆ ಎಲ್ಲಾ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಇತರರಿದ್ದರು.