ಸಾರಾಂಶ
ಪಕ್ಷದ ಸದಸ್ಯತ್ವ ಪಡೆಯುವುದು ಹಿಂದಿನಿಂದಲೂ ಇತ್ತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಬೃಹತ್ ಅಭಿಯಾನವನ್ನಾಗಿಸಿದ್ದಾರೆ ಎಂದು ರೂಪಾಲಿ ನಾಯ್ಕ ತಿಳಿಸಿದರು.
ಕಾರವಾರ: ಸದಸ್ಯತ್ವ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಬೃಹತ್ ಅಭಿಯಾನದ ರೀತಿಯಲ್ಲಿ ಪ್ರಚುರ ಪಡಿಸಿದ್ದು, ಈ ಅಭಿಯಾನವನ್ನು ಸಂಪೂರ್ಣ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಮನವಿ ಮಾಡಿದರು.
ಶಿರಸಿಯ ಬಿಜೆಪಿ ಕಾರ್ಯಾಲಯದಲ್ಲಿ ಹಾಗೂ ಸಿದ್ದಾಪುರ ಮಂಡಲದಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಹಾಗೂ ಸಭೆಯಲ್ಲಿ ಮಾತನಾಡಿದರು.ಪಕ್ಷದ ಸದಸ್ಯತ್ವ ಪಡೆಯುವುದು ಹಿಂದಿನಿಂದಲೂ ಇತ್ತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಬೃಹತ್ ಅಭಿಯಾನವನ್ನಾಗಿಸಿದ್ದಾರೆ. ಪ್ರಜಾಪ್ರಭುತ್ವ ಆಡಳಿತ ಇರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯನ್ನು ಇನ್ನಷ್ಟು ಮತ್ತಷ್ಟು ಬಲಿಷ್ಠವಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದರು.
ದೇಶ ಸೇವೆ, ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ನಮ್ಮ ದೇಶವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಲ್ಲಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದಾರೆ. ಅವರೊಟ್ಟಿಗೆ ನಾವು ಕೈಜೋಡಿಸಬೇಕು. ಈ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಘನತೆ, ರಕ್ಷಣೆಗೆ ಒಗ್ಗೂಡೋಣ ಎಂದರು.ದೇಶವ್ಯಾಪಿ ನಡೆಯುತ್ತಿರುವ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ವಾರ್ಡ್ ಬೂತ್ ಮಟ್ಟದಲ್ಲಿ ತೆರಳಿ ಸದಸ್ಯತ್ವ ಅಭಿಯಾನ ನಡೆಸಬೇಕು ಎಂದು ರೂಪಾಲಿ ಎಸ್. ನಾಯ್ಕ ವಿನಂತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳು, ಮಂಡಲದ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.