ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಹೆಗಡೆ ಕೆರೆಮನೆ ಅವರು ಮಾತನಾಡಿ, ಗುರೂಜಿಯವರ ನೇತೃತ್ವದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ತಾಣವಾಗಿದೆ ಎಂದರು.

ಹೊನ್ನಾವರ: ಒಂದು ಭಾಷೆಯನ್ನು ರಕ್ಷಿಸಿದ ಕಲೆ ಯಾವುದಾದರೂ ಇದ್ದರೆ ಅದು ಯಕ್ಷಗಾನ. ಯಕ್ಷಗಾನದಲ್ಲಿ ಅಡಕವಾಗಿರುವ ಕಥನಗಳ ಸಾರವನ್ನು ಅರ್ಥ ಮಾಡಿಕೊಂಡು, ಕಲೆಯನ್ನು ತಾತ್ಸಾರ ಮಾಡದೆ ನಮ್ಮ ಮನೆಯ- ಮನದ ಆಟವನ್ನಾಗಿ ಸ್ವೀಕರಿಸಬೇಕು ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಹೇಳಿದರು.

ಬಂಗಾರಮಕ್ಕಿಯಲ್ಲಿ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ, ಸಿಲೆಕ್ಟ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಯಕ್ಷ ಪೂರ್ಣಿಮೆ- 2026 ಯಕ್ಷಗಾನ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಲಾವಿದರು ಇತರರನ್ನು ಕೇವಲ ಅನುಕರಿಸುವ ಬದಲು, ಅವರಿಂದ ಕಲಿಯುವ ಮನೋಭಾವದೊಂದಿಗೆ ಕಲೆಯನ್ನು ಅನುಸರಿಸಬೇಕು. ನಿರಂತರ ಅಭ್ಯಾಸ ಮತ್ತು ಪರಿಶ್ರಮದ ಮೂಲಕ ಯಕ್ಷಗಾನವನ್ನು ಕರಗತ ಮಾಡಿಕೊಂಡು ಪ್ರದರ್ಶನ ನೀಡಬೇಕು. ಕಲೆ ಕೇವಲ ಪ್ರೇಕ್ಷಕರ ಚಪ್ಪಾಳೆಗಾಗಿ ಸೀಮಿತವಾಗದೆ, ಅದರ ಸಾಂಪ್ರದಾಯಿಕ ಮೌಲ್ಯಗಳು ಹಾಗೂ ಶ್ರೇಷ್ಠತೆಯನ್ನು ಉಳಿಸಿಕೊಂಡು ಬೆಳೆಯಬೇಕು ಎಂದರು.ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಹೆಗಡೆ ಕೆರೆಮನೆ ಅವರು ಮಾತನಾಡಿ, ಗುರೂಜಿಯವರ ನೇತೃತ್ವದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ತಾಣವಾಗಿದೆ ಎಂದರು.

ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಗೆ ಬಂಗಾರಮಕ್ಕಿ ಸಲ್ಲಿಸುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ. ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಐರೋಡಿ ಮಾತನಾಡಿ, ಯಕ್ಷಗಾನದ ಸಂಪ್ರದಾಯಬದ್ಧ ಸ್ವರೂಪವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕಲಾ ಕೇಂದ್ರಗಳು ಮತ್ತು ಕಲಾವಿದರ ಮೇಲಿದೆ ಎಂದರು. ವಿಶ್ರಾಂತ ಪ್ರಾಂಶುಪಾಲ ವಿ.ಜಿ. ಹೆಗಡೆ ಗುಡ್ಗೆ, ಯಕ್ಷಗಾನ ತರಬೇತುದಾರ ಉಮೇಶ್ ಭಟ್ ಬಾಡ, ಪರಿಸರ ವಿಜ್ಞಾನಿ ಹಾಗೂ ವನ್ಯಜೀವಿ ತಜ್ಞ ಡಾ. ಎನ್.ಎಂ. ಗುರುಪ್ರಸಾದ್ ಮಾತನಾಡಿದರು.ಶೈಲೇಶ್ ಕುಮಟಾ ಕಾರ್ಯಕ್ರಮ ನಿರೂಪಿಸಿದರು. ಯಕ್ಷ ಪೂರ್ಣಿಮೆ- 2026 ಉತ್ಸವದ ಅಂಗವಾಗಿ ಹೇರಂಭ ವಿಜಯ(ಭೂ ಕೈಲಾಸ) ಯಕ್ಷಗಾನ ಪ್ರದರ್ಶನ ನಡೆಯಿತು.