ಸಾರಾಂಶ
- ನೇತ್ರ ತಪಾಸಣೆ ಶಿಬಿರದಲ್ಲಿ ಡಾ.ಹಿರಿಯ ನೇತ್ರತಜ್ಞ ಉಮೇಶ ಸಲಹೆ - - -
ಕನ್ನಡಪ್ರಭ ವಾರ್ತೆ ದಾವಣಗರೆ ಮನುಷ್ಯನ ದೇಹಕ್ಕೆ ಹೃದಯ ಎಷ್ಟು ಪ್ರಮುಖ ಅಂಗವೋ, ಕಣ್ಣುಗಳೂ ಅಷ್ಟೇ ಮುಖ್ಯವಾಗಿವೆ. ಕಣ್ಣುಗಳ ಆರೈಕೆಯತ್ತ ಜನರು ಗಮನಹರಿಸಬೇಕು ಎಂದು ಐ ಕೇರ್ ಸೆಂಟರ್ ಕಣ್ಣಿನ ಆಸ್ಪತ್ರೆಯ ಹಿರಿಯ ನೇತ್ರತಜ್ಞ ಡಾ. ಜಿ.ಎಸ್. ಉಮೇಶ್ ಹೇಳಿದರು.ನಗರದ ಕೆ.ಬಿ. ಬಡಾವಣೆಯ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಶುಕ್ರವಾರ ಐ ಕೇರ್ ಸೆಂಟರ್ ಕಣ್ಣಿನ ಆಸ್ಪತ್ರೆ ಹಾಗೂ ಕಠಾರೆ ಆಫ್ಟಿಕಲ್ಸ್‌ನಿಂದ ಮಾಧ್ಯಮ ಸಿಬ್ಬಂದಿ ಹಾಗೂ ಕುಟುಂಬ ವರ್ಗದ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಮೊಬೈಲ್, ಕಂಪ್ಯೂಟರ್ ಬಳಕೆ ಹೆಚ್ಚುತ್ತಿದೆ. ಅದರಲ್ಲೂ ಮಕ್ಕಳು, ಯುವಪೀಳಿಗೆ ಮೊಬೈಲ್ ದಾಸರಾಗಿ ಕಣ್ಣಿನ ತೊಂದರೆ ಅನುಭವಿಸುತ್ತಿದ್ದಾರೆ. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ನೇತ್ರತಜ್ಞರಿಂದ ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ಅಂಧತ್ವಕ್ಕೆ ಒಳಗಾಗುವ ಅಪಾಯವೂ ಇಲ್ಲದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.ಡೆಕನ್ ಹೆರಾಲ್ಡ್ ಪತ್ರಿಕೆ ಮುಖ್ಯ ವರದಿಗಾರ ನೃಪತುಂಗ ಮಾತನಾಡಿ, ಪತ್ರಕರ್ತರಾದ ನಾವು ಸುದ್ದಿ ಕಳಿಸುವ, ಮಾಡುವ ಧಾವಂತದಲ್ಲಿ ಕಣ್ಣಿನ ಬಗ್ಗೆ ಅಷ್ಟಾಗಿ ಕಾಳಜಿ ತೋರುವುದಿಲ್ಲ. ಇಂತಹ ಸಂದರ್ಭದಲ್ಲಿ ಪತ್ರಕರ್ತರಿಗೆ ಕಣ್ಣಿನ ಪರೀಕ್ಷೆ ಅಗತ್ಯವಿತ್ತು. ಕೆಲಸದ ಒತ್ತಡ ಎಷ್ಟೇ ಇರಲಿ, ಪತ್ರಕರ್ತರು ಮೊದಲ ಆದ್ಯತೆ ತಮ್ಮ ಆರೋಗ್ಯಕ್ಕೆ ಕೊಡಬೇಕು ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಮಾತನಾಡಿ, ಪತ್ರಕರ್ತರು ಬಹಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವಾಗಲು ಮೊಬೈಲ್ ಕಂಪ್ಯೂಟರ್ ಮುಂದೆಯೇ ಕನಿಷ್ಠ ಏಳೆಂಟು ತಾಸು ಕೆಲಸ ಮಾಡುವ ಅನಿವಾರ್ಯತೆ ನಮ್ಮದಾಗಿದೆ. ಇದರಿಂದಾಗಿ ಕಣ್ಣುಗಳು ಸಮಸ್ಯೆಗೆ ಒಳಗಾಗುತ್ತವೆ. ಆದ್ದರಿಂದ ಪತ್ರಕರ್ತರು ಆಗಿಂದಾಗ್ಗೆ ಆರೋಗ್ಯ, ಕಣ್ಣುಗಳ ತಪಾಸಣೆ ಮಾಡಿಸಿ, ರಕ್ಷಿಸಿಕೊಳ್ಳಬೇಕು ಎಂದರು.ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಮಾತನಾಡಿ, ಎಲ್ಲ ವರ್ಗದವರ ಕಷ್ಟ- ಸುಖಗಳನ್ನು ಓದುಗರಿಗೆ ತಿಳಿಸುವ ಸಲುವಾಗಿ ಸುದ್ದಿಗಳ ಬರೆಯುತ್ತೇವೆ. ಆದರೆ, ನಾವೇ ನಮ್ಮ ಆರೋಗ್ಯ ಬಗ್ಗೆ ಆಷ್ಟಾಗಿ ಕಾಳಜಿ ತೋರುತ್ತಿಲ್ಲ. ಕೆಲಸದ ಒತ್ತಡದಲ್ಲಿ ಊಟ, ನಿದ್ದೆ ಬಿಡುತ್ತೇವೆ. ಹೆಚ್ಚು ಕೆಲಸ ಮಾಡುವ ವೃತ್ತಿ ನಮ್ಮದಾಗಿದ್ದು, ನಮ್ಮ ಕಣ್ಣು ಹೆಚ್ಚಾಗಿ ಬಳಲುವುದು ಸಹಜ. ಹಾಗಾಗಿ, ನಮ್ಮೆಲ್ಲಾ ಸಹುದ್ಯೋಗಿಗಳು, ಕುಟುಂಬ ವರ್ಗದ ಅನುಕೂಲಕ್ಕಾಗಿ ಕೂಟದಲ್ಲೇ ಐ ಕೇರ್ ಕಣ್ಣಿನ ಆಸ್ಪತ್ರೆ ಡಾ. ಜಿ.ಎಸ್. ಉಮೇಶ್ ಹಾಗೂ ಕಠಾರೆ ಅಪ್ಟಿಕಲ್ಸ್ ಮತ್ತು ತಂಡದಿಂದ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಯುಕ್ತ ಕರ್ನಾಟಕದ ಹಿರಿಯ ಉಪ ಸಂಪಾದಕ ಮಂಜುನಾಥ ಕಾಡಜ್ಜಿ ಮಾತನಾಡಿ, ವರದಿಗಾರ ಕೂಟ ಆರಂಭವಾದಾಗಿನಿಂದ ಉತ್ತಮ ಕಾರ್ಯ ಮಾಡುತ್ತಿದೆ. ಕೋವಿಡ್ ವೇಳೆ ಪತ್ರಕರ್ತರಿಗೆ ಲಸಿಕೆ ಹಾಕುವ ಮೂಲಕ ನೆರವಾಗಿದೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಶೇ.90 ಪತ್ರಕರ್ತರಿಗೆ ತಮ್ಮ ಹಾಗೂ ಕುಟುಂಬದ ಆರೋಗ್ಯ ತಪಾಸಣೆಗೂ ಹಣ ಇರುವುದಿಲ್ಲ. ಹಾಗಾಗಿ ಇಂತಹ ಶಿಬಿರ ಸಹಕಾರಿಯಾಗಿವೆ ಎಂದರು.ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ, ಕಠಾರೆ ಆಪ್ಟಿಕಲ್ಸ್‌ನ ಮಾಲೀಕ ಸಂತೋಷ್ ಕಠಾರೆ, ಐ ಕೇರ್ ಕಣ್ಣಿನ ಆಸ್ಪತ್ರೆಯ ಮೋಹನ್, ಸಿಂಚನಾ, ರಾಕೇಶ, ಲೋಕೇಶ, ಮೋಹನ, ಸೆಂಚೂರ್ ಪ್ರೈವೇಟ್ ಲಿಮಿಟೆಡ್‌ನ ರುದ್ರಮುನಿ ಹಿರೇಮಠ್, ಕೂಟದ ಪಿ.ಎಸ್. ಲೋಕೇಶ, ಬಿ.ಸಿಕಂದರ್, ಆರ್.ಎಸ್. ತಿಪ್ಪೇಸ್ವಾಮಿ, ಡಾ. ಕೆ.ಜೈಮುನಿ, ಸೋಮಶೇಖರ, ಮಹದೇವ, ಸಂಜು, ಮಹಾಂತೇಶ ಕುರ್ಬೆಟ್, ವಿಠ್ಠಲ, ಕೈದಾಳ ಮಲ್ಲಿಕಾರ್ಜುನ, ನಟರಾಜ ಇತರರು ಇದ್ದರು. ಇದೇ ವೇಳೆ ಸೆಂಚೂರು ಕಂಪನಿಯಿಂದ ಔಷಧಿಗಳನ್ನು ಉಚಿತವಾಗಿ, ರಿಯಾಯಿತಿಯಲ್ಲಿ ಕನ್ನಡಕ ನೀಡಲಾಯಿತು.
- - --18ಕೆಡಿವಿಜಿ1, 2: