ಸಾಧನೆಯ ಕಡೆ ನಿಮ್ಮ ಗುರಿ ಇರಲಿ: ಶಾಸಕ ಪಿ.ರವಿಕುಮಾರ್

| Published : Jan 12 2025, 01:16 AM IST

ಸಾರಾಂಶ

ವಿದ್ಯಾರ್ಥಿ ದಿಸೆಯಲ್ಲೇ ದೊಡ್ಡ ಮಟ್ಟದ ಕನಸನ್ನು ಕಾಣಬೇಕು. ಗುರಿ ಮುಟ್ಟುವವರೆಗೂ ಹಿಂತಿರುಗಿ ನೋಡಬಾರದು. ಸತತ ಅಭ್ಯಾಸ, ಪ್ರಯತ್ನದಿಂದ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಚಿನ್ನದ ಸಮಯವನ್ನು ಹಾಳು ಮಾಡಿಕೊಳ್ಳದೆ ಅಭ್ಯಾಸದಲ್ಲಿ ತೊಡಗಿ. ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿ ಜೀವನ ಎಂದರೆ ಅದು ಗೋಲ್ಡನ್ ಲೈಪ್ ಎಂಬುದನ್ನು ಮಕ್ಕಳು ಸಾಧಿಸಿ ತೋರಿಸಬೇಕು. ಇಂತಹ ಸಮಯದಲ್ಲಿ ಏನು ಬೇಕಾದರೂ ಸಾಧನೆ ಮಾಡುವಂತಹ ಮಟ್ಟದಲ್ಲಿರುತ್ತೀರಿ. ಸಾಧನೆಯ ಕಡೆಗೆ ಸದಾ ನಿಮ್ಮ ಗುರಿ ಇರಬೇಕು ಎಂದು ಶಾಸಕ ಪಿ.ರವಿಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್.ಬಿ.ಎಜುಕೇಷನ್ ಟ್ರಸ್ಟ್, ಗೀತಾಂಜಲಿ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನಡೆದ ೨೦೨೪-೨೫ನೇ ಸಾಲಿನ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲೇ ವೈದ್ಯರು, ಎಂಜಿನಿಯರ್, ಸಿಎ, ರಾಜಕಾರಣಿ, ಉದ್ಯಮಿ ಆಗಬೇಕೆಂಬ ಕನಸು ಇರುತ್ತದೆ. ಕನಸು ಕಟ್ಟಿಕೊಂಡರಷ್ಟೇ ಸಾಲದು. ಅದನ್ನು ನನಸು ಮಾಡಿಕೊಳ್ಳುವ ಛಲ, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ದಿಸೆಯಲ್ಲೇ ದೊಡ್ಡ ಮಟ್ಟದ ಕನಸನ್ನು ಕಾಣಬೇಕು. ಗುರಿ ಮುಟ್ಟುವವರೆಗೂ ಹಿಂತಿರುಗಿ ನೋಡಬಾರದು. ಸತತ ಅಭ್ಯಾಸ, ಪ್ರಯತ್ನದಿಂದ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಚಿನ್ನದ ಸಮಯವನ್ನು ಹಾಳು ಮಾಡಿಕೊಳ್ಳದೆ ಅಭ್ಯಾಸದಲ್ಲಿ ತೊಡಗಿ. ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಮಕ್ಕಳಿಗೆ ಪಠ್ಯದ ಜೊತೆಗೆ ಕ್ರೀಡೆಯೂ ಅಗತ್ಯ. ನಾವೆಲ್ಲ ಹುಟ್ಟುವಾಗ ಎಲ್ಲಿ ಹುಟ್ಟುತ್ತೇವೆ ಎಂದು ಗೊತ್ತಿರುವುದಿಲ್ಲ. ಆದರೆ, ಜೀವನ ನಮ್ಮ ಕೈಯ್ಯಲ್ಲೇ ಇರುತ್ತದೆ. ಅದನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕ್ರೀಡೆ ಮಕ್ಕಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ಅವಶ್ಯ. ಸಾಧನೆ ಮಾಡುವುದರೊಂದಿಗೆ ಮಂಡ್ಯಕ್ಕೆ ಒಳ್ಳೆಯ ಹೆಸರು ತರುವಂತೆ ಕಿವಿಮಾತು ಹೇಳಿದರು.

ನಗರಸಭಾಧ್ಯಕ್ಷ ಎಂ.ಎಸ್.ಪ್ರಕಾಶ್, ಎಸ್.ಬಿ.ಎಜುಕೇಷನ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಉಪಾಧ್ಯಕ್ಷೆ ಡಾ. ಹೇಮಾ ಶಿವಲಿಂಗಯ್ಯ, ಗೀತಾಂಜಲಿ ಶಾಲೆಯ ಪ್ರಾಂಶುಪಾಲೆ ಸರೋಜ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.