ಸಾರಾಂಶ
ಇಡೀ ಜಗತ್ತಿಗೆ ಅದ್ಭುತ ಶಿಲ್ಪಕಲೆಯನ್ನು ಪರಿಚಯಿಸಿದವರು ಅಮರಶಿಲ್ಪಿ ಜಕಣಾಚಾರಿಯವರು. 11ನೇ ಶತಮಾನದ ಅವರ ಶಿಲ್ಪಕಲೆಯನ್ನು ಇಂದಿಗೂ ಸರಿಗಟ್ಟಲು ಅಥವಾ ಹೋಲಿಕೆ ಮಾಡಲು ಸಾಧ್ಯವಿಲ್ಲ.
ಕೊಪ್ಪಳ: ಅಮರ ಶಿಲ್ಪಿ ಜಕಣಾಚಾರಿ ತನ್ಮಯತೆ ಹಾಗೂ ಶ್ರದ್ಧೆಯಿಂದ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಕಾಯಕ ಶ್ರದ್ಧೆಯನ್ನು ಇಂದು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ತಹಶೀಲ್ದಾರ ವಿಠ್ಠಲ್ ಚೌಗಲ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅನೇಕ ಪುಸ್ತಕ ಹಾಗೂ ಇತಿಹಾಸದ ಮೂಲಕ ನಾವು ಜಕಣಾಚಾರಿಯವರ ಜೀವನ ಚರಿತ್ರೆ ತಿಳಿದಿದ್ದೇವೆ. ಆದರೆ ಅವರ ಕಾಯಕ ನಿಷ್ಠೆಯನ್ನು ಇಂದಿಗೂ ನಾವು ಬೇಲೂರು, ಸೋಮನಾಥ ದೇವಾಲಯ, ಹಳೇಬೀಡುಗಳಲ್ಲಿ ನೋಡಬಹುದು. ಪೂರ್ಣ ಶ್ರದ್ಧೆ ಮತ್ತು ತನ್ಮಯತೆಯಿಂದ ಮಾತ್ರ ಅಂತಹ ಶಿಲ್ಪಗಳನ್ನು ರಚಿಸಲು ಸಾಧ್ಯ. ಇಂದು ನಾವು ಅವರ ಕಾಯಕ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಹನುಮಸಾಗರದ ಪ್ರೌಢಶಾಲಾ ಶಿಕ್ಷಕ ರಾಮಚಂದ್ರ ಬಡಿಗೇರ್ ಮಾತನಾಡಿ, ಇಡೀ ಜಗತ್ತಿಗೆ ಅದ್ಭುತ ಶಿಲ್ಪಕಲೆಯನ್ನು ಪರಿಚಯಿಸಿದವರು ಅಮರಶಿಲ್ಪಿ ಜಕಣಾಚಾರಿಯವರು. 11ನೇ ಶತಮಾನದ ಅವರ ಶಿಲ್ಪಕಲೆಯನ್ನು ಇಂದಿಗೂ ಸರಿಗಟ್ಟಲು ಅಥವಾ ಹೋಲಿಕೆ ಮಾಡಲು ಸಾಧ್ಯವಿಲ್ಲ. ವಿಶ್ವಕರ್ಮ ಸಮುದಾಯಕ್ಕೆ ಕಿರೀಟಪ್ರಾಯರಾಗಿರುವ ಜಕಣಾಚಾರಿಯವರು ತಮ್ಮ ಕಲೆ, ಶ್ರದ್ಧೆಯನ್ನು ನಂಬಿ ಬದುಕಿದವರು. ಅವರ ಪ್ರಸಿದ್ಧ ಶಿಲ್ಪಕಲೆಗಳಲ್ಲಿಯೂ ಸಹ ಅವರ ಹೆಸರನ್ನು ನಮೂದಿಸಿಲ್ಲ. ಅಷ್ಟು ದೊಡ್ಡ ಸಾಧಕರಾಗಿಯೂ ಹೆಸರು, ಪ್ರಸಿದ್ಧಿಗೆ ಆಸೆ ಪಡದೆ ನಿಸ್ವಾರ್ಥದಿಂದ ತಮ್ಮ ಕಲೆಯನ್ನು ವ್ಯಕ್ತಪಡಿಸುವುದರಲ್ಲಿಯೇ ಜೀವನದ ಸಾರ್ಥಕ್ಯವನ್ನು ಕಂಡುಕೊಂಡರು. ಅವರ ಸಮುದಾಯದವರು ಕೂಡ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಅವರ ಕುಲಕಸುಬುಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಪ್ರಾಚೀನ ಕುಲಕಸುಬುಗಳಿಗೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹೊಸ ರೂಪ ಕೊಟ್ಟು ಕಲೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಸಿರಸಪ್ಪಯ್ಯನಮಠದ ಶೇಷಪ್ಪಯ್ಯ ಮಹಾಸ್ವಾಮಿ, ಗಿಣಿಗೇರಿಯ ಸುಬ್ಬಣ್ಣಾಚಾರ್ಯ, ನರಸಿಂಹ ದಿವಾಕರ ಮಹಾಸ್ವಾಮಿ, ಶ್ರೀಕಂಠಸ್ವಾಮಿ, ಸಮುದಾಯದ ಜಿಲ್ಲಾಧ್ಯಕ್ಷ ಈಶಪ್ಪ ಬಡಿಗೇರ, ಗೌರವಾಧ್ಯಕ್ಷ ಶೇಖರಪ್ಪ ಬಡಿಗೇರ, ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವಪ್ಪ ಬಡಿಗೇರ, ವಿಶ್ವಕರ್ಮ ಅಭಿವೃದ್ಧಿ ನಿಗಮ,ಕೊಪ್ಪಳದ ಪ್ರಭಾಕರ ಬಡಿಗೇರ, ಮಾಜಿ ಜಿಲ್ಲಾಧ್ಯಕ್ಷರಾದ ಅಶೋಕ ವೇದಪಾಠಕ, ಲಕ್ಷ್ಮೇಶ ಬಡಿಗೇರ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.