ಕರ್ನಾಟಕವನ್ನು ವಿಭಜಿಸುವ ಮನಸ್ಸಿನವರಿಗೆ ಧಿಕ್ಕಾರ ಹೇಳೋಣ, ನವೆಂಬರ್ ಕನ್ನಡಿಗರಿಗೆ ಎಚ್ಚರಿಕೆ ಹೇಳೋಣ, ಸರ್ಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಲು ಒತ್ತಾಯಿಸೋಣ, ಕನ್ನಡದ ಉಳಿವಿಗೆ ಶಕ್ತಿಯಾಗೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೆಗೌಡ ಕರೆ ನೀಡಿದರು.

ಹಾನಗಲ್ಲ: ಕರ್ನಾಟಕವನ್ನು ವಿಭಜಿಸುವ ಮನಸ್ಸಿನವರಿಗೆ ಧಿಕ್ಕಾರ ಹೇಳೋಣ, ನವೆಂಬರ್ ಕನ್ನಡಿಗರಿಗೆ ಎಚ್ಚರಿಕೆ ಹೇಳೋಣ, ಸರ್ಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಲು ಒತ್ತಾಯಿಸೋಣ, ಕನ್ನಡದ ಉಳಿವಿಗೆ ಶಕ್ತಿಯಾಗೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೆಗೌಡ ಕರೆ ನೀಡಿದರು. ಸೋಮವಾರ ಇಲ್ಲಿನ ಬಾಬು ಜಗಜೀವನರಾಮ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಹಾವೇರಿ ಜಿಲ್ಲಾ ಮಟ್ಟದ ನಾಡ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಘಟನೆ 30 ಕನ್ನಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದೆ. ಈಗ ಯುವ ಪೀಳಿಗೆ ಕನ್ನಡದ ಅಭಿಮಾನ ಬೆಳೆಸಿಕೊಳ್ಳಲು ನಾವೆಲ್ಲ ಪ್ರೇರಣೆಯಾಗಬೇಕಾಗಿದೆ. ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿದೆ. ಮೊರಾರ್ಜಿ ವಸತಿ ಶಾಲೆಗಳ ವ್ಯವಸ್ಥೆ ಹದಗೆಟ್ಟಿದೆ. ಕನ್ನಡ ನೆಲದಲ್ಲಿ ಕನ್ನಡಿಗರಿಗೇ ನ್ಯಾಯ ಕೊಡಿಸಲು ಹೋರಾಡುವ ಸ್ಥಿತಿ ಇದೆ. ಕೊಡಗಿನ ಕನ್ನಡ ಮಠವನ್ನು ಉಳಿಸಲು 15 ವರ್ಷ ನ್ಯಾಯಾಲಯದ ಹೋರಾಟವೂ ಸೇರಿ ಕಷ್ಟಪಡಬೇಕಾಯಿತು. ನಮ್ಮ ನಾಡು ನುಡಿ ಜಲ ಸಂಸ್ಕೃತಿಯ ಉಳಿವಿಗಾಗಿ ನಾವು ಬದ್ಧರಾಗೋಣ. ಕನ್ನಡವೇ ನಮ್ಮ ಶಕ್ತಿ ಎಂದರು.ಶಾಸಕ ಶ್ರೀನಿವಾಸ ಮಾನೆ ಮುಖ್ಯ ಅತಿಥಿಯಾಗಿ ಮಾತನಾಡಿ, ಕನ್ನಡ ನ್ಯಾಯಕ್ಕಾಗಿ ಹೋರಾಡುವ ಗಟ್ಟಿ ನೆಲ. ಕನ್ನಡಕ್ಕೆ ಅಂತರಾಷ್ಟ್ರೀಯ ಗೌರವವಿದೆ. ಇಂಗ್ಲಿಷ್ ಬಳಕೆ ನಿಲ್ಲಿಸಿದರೆ ಕನ್ನಡ ತಾನಾಗಿಯೇ ಉಳಿಯುತ್ತದೆ. ಕನ್ನಡತ್ವದ ಸಂಕಲ್ಪ ನಮ್ಮದಾಗಲಿ. ಬಸವಣ್ಣನವರ ಸಮಾನತೆ ಮಾನವೀಯತೆ ಪ್ರಭುದ್ಧ ಸಂದೇಶಗಳು ಕನ್ನಡದ ಶಕ್ತಿ. ಅವರ ಮೂಲ ಆಶಯವನ್ನು ಉಳಿಸಿಕೊಳ್ಳಲು ಮುಂದಾಗೋಣ. ನಮ್ಮ ಕರ್ನಾಟರ ರಾಜ್ಯ ಸರ್ಕಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಊರಿನ ಅಭಿವೃದ್ಧಿಗೆ ತಲಾ ಕೋಟಿ ರೂ ಅನುದಾನ ನೀಡಿದೆ. ಕನ್ನಡಕ್ಕಾಗಿ ದುಡಿದವರನ್ನು ನೆನೆಯೋಣ. ಕನ್ನಡದ ಶಕ್ತಿಯನ್ನು ಹೆಚ್ಚಿಸೋಣ ಎಂದರು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ, ಸತ್ಯ ನ್ಯಾಯ ಧರ್ಮದ ಆಸಕ್ತಿ ಮೂಡಿಸುವಲ್ಲಿ ಕನ್ನಡ ಸಂಘಟನೆಗಳು ಮುಂದಾಗಲಿ. ಸತ್ಯ ನ್ಯಾಯ ಹೇಳುವವರನ್ನು ಹತ್ತಿಕ್ಕುವುದನ್ನೇ ನೋಡುತ್ತಿದ್ದೇವೆ. ಟೀಕಾಕಾರರೇ ಈಗ ವಿಜೃಂಭಿಸುತ್ತಿದ್ದಾರೆ. ನಮ್ಮ ಸಂವಿಧಾನದ ಆಶಯವೇ ನಮ್ಮೆಲ್ಲರ ನಡುವಳಿಕೆಯಾಗಬೇಕು. ಅಪರಾಧಗಳು ಇಳಿದು, ಉಪಕಾರಗಳು ಬೆಳಗಲಿ. ನಮ್ಮ ಮನೆಗಳು ಸಂತಸದ ಮನೆಗಳಾಗಿಲಿ. ಕರ್ನಾಟಕದ ಪ್ರಾಕೃತಿಕ ಐಸಿರಿಯನ್ನು ಗಣಿಗಾರಿಕೆ ಮೂಲಕ ಹಾಳು ಮಾಡುವ, ನಮ್ಮ ಸಂಪತ್ತನ್ನು ಲೂಟಿ ಮಾಡುವವರ ಬಗ್ಗೆ ಈಗಲಾದರೂ ಎಚ್ಚರಿಕೆ ವಹಿಸೋಣ ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಾಜಿ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪುರ, ಡಾ.ಎಚ್.ಎಚ್. ಹೆಬ್ಬಾಳ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ, ಡಾ.ವೀರೇಶ ಹಿತ್ತಲಮನಿ ಮಾತನಾಡಿದರು. ಮಾರುತಿ ಪೇಟಕರ, ಹೊನ್ನಪ್ಪ ಬಾರ್ಕಿ, ರಾಜೇಶ ಪಾಟೀಲ, ಗುರುನಾಥ ಗವಾಣಿಕರ, ಇರ್ಫಾನ್ ನಾಗರವಳ್ಳಿ, ಮಲ್ಲಿಕಾರ್ಜುನ ಸುಣಗಾರ, ಮಾರುತಿ ಶಿಡ್ಲಾಪುರ, ಗೀತಾ ಶಿಡ್ಲಣ್ಣನವರ ಅವರಿಗೆ ಕದಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಮಾರುತಿ ತಾಂದಳೆ ಅಧ್ಯಕ್ಷತೆವಹಿಸಿದ್ದರು. ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ನಾಗರಾಜ ಮಡಿವಾಳರ, ಜಿಲ್ಲಾಧ್ಯಕ್ಷ ಆನಂಧ ಮುರಡಣ್ಣನವರ, ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಗೀತಾ ಅರಳೆಲಿಮಠ, ಲಕ್ಷ್ಮಿ ಜೋಶಿ, ರೂಪಾ ಬಂಗಿ, ಜಿ.ಎಸ್. ಪಾಟೀಲ, ಶೀಲಾ ಭದ್ರಾವತಿ, ಪ್ರಕಾಶ ಗೋಣೆಮ್ಮನವರ, ವಾಗೀಶ ಎಮ್ಮಿ, ಜ್ಯೋತಿ ಚಿಗಳ್ಳಿ, ನಾಘರಾಜ ಶಿಡ್ಲಣ್ಣನವರ, ಸಲೀಂ ಬೇಗ್, ರುಕ್ಮಿಣಿ ಹೂಲಿಕಟ್ಟಿ, ಜಿ.ಎಸ್.ಪಾಟೀಲ, ಪ್ರೇಮಾ ಮುದ್ದಿ, ಪ್ರಕಾಶ ಪರಪ್ಪಗೌಡ್ರ, ರಮೆಶ ಮಾಕನೂರ, ರೇಣುಕಾ ಮುದ್ದಿ, ಶಂಭು ಕೇರಿ ಅತಿಥಿಗಳಾಗಿದ್ದರು.