ಜೀವನ ಪರ್ಯಂತರವಾಗಿ ಕನ್ನಡಿಗರಾಗೋಣ: ದೊಡ್ಡನಗೌಡ ಪಾಟೀಲ

| Published : Nov 02 2024, 01:28 AM IST

ಜೀವನ ಪರ್ಯಂತರವಾಗಿ ಕನ್ನಡಿಗರಾಗೋಣ: ದೊಡ್ಡನಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ನವೆಂಬರ್‌ ತಿಂಗಳ ಕನ್ನಡಿಗರಾಗದೆ ವರ್ಷಪೂರ್ತಿ ಜೀವನ ಪರ್ಯಂತರವಾಗಿ ಕನ್ನಡಿಗರಾಗಿ ಬದುಕಿ ಬಾಳಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ನಾವು ನವೆಂಬರ್‌ ತಿಂಗಳ ಕನ್ನಡಿಗರಾಗದೆ ವರ್ಷಪೂರ್ತಿ ಜೀವನ ಪರ್ಯಂತರವಾಗಿ ಕನ್ನಡಿಗರಾಗಿ ಬದುಕಿ ಬಾಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಕನ್ನಡನಾಡಿಗೆ ಬಂದ ಅನ್ಯಭಾಷಾ ಜನರಿಗೆ ನಾವು ಕನ್ನಡ ಕಲಿಸುವ ಕೆಲಸ ಆಗಬೇಕು. ಆದರೆ ಅದನ್ನು ಮಾಡದ ನಾವು ಅವರ ಭಾಷೆ ಕಲಿಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

ಕನ್ನಡ ಭಾಷೆಯು ತಾಯಿಭಾಷೆಯಾಗಿದ್ದು, ಇದನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡಬೇಕು, ಮಾತನಾಡಬೇಕು. ಕನ್ನಡ ಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಾಗಬೇಕು. ಜೀವನ ಪರ್ಯಂತರವಾಗಿ ಕನ್ನಡದ ಮಕ್ಕಳಂತೆ ಜೀವನ ಮಾಡಬೇಕು ಎಂದರು.

ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಆಧುನೀಕರಣದ ಪ್ರಭಾವ ಹಾಗೂ ಅನ್ಯಭಾಷೆಯ ಮೇಲೆ ಇರುವ ವ್ಯಾಮೋಹದಿಂದ ಇತ್ತೀಚೆಗೆ ಕನ್ನಡ ಭಾಷೆಯ ಬಗ್ಗೆ ನಮ್ಮ ನಾಡಿನ ಜನರಲ್ಲಿ ಭಾಷಾ ಅಭಿಮಾನ ಕಡಿಮೆಯಾಗುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಕರ್ನಾಟಕದ ಜನರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನಾದರು ಕಲಿಸುವ ಕೆಲಸವಾಗಬೇಕು. ಅನೇಕ ಕವಿಗಳು ಹಾಗೂ ಬರಹಗಾರರು ಕನ್ನಡದ ಅಸ್ಮೀತೆಯನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇಂದಿನ ಯುವಕರು ಕೊಡುಗೆ ನೀಡುವಂತಾಗಬೇಕು ಎಂದರು.ಮೆರವಣಿಗೆ:

ತಾಲೂಕಾಡಳಿತ ಹಾಗೂ ಕನ್ನಡಪರ ಸಂಘಟನೆಯಿಂದ ರಾಜ್ಯೋತ್ಸವದ ಅಂಗವಾಗಿ ಕುಷ್ಟಗಿ ಪಟ್ಟಣದ ಮಲ್ಲಯ್ಯ ವೃತ್ತದಿಂದ ತಾಲೂಕು ಕ್ರೀಡಾಂಗಣದವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ನಡೆಯಿತು. ಈ ವೇಳೆ ಶಾಲಾ ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಗಮನ ಸೆಳೆದರು.

ಈ ಸಂದರ್ಭದಲ್ಲಿ ತಾಪಂ ಇಒ ಪಂಪಾಪತಿ ಹಿರೇಮಠ, ಸಿಪಿಐ ಯಶವಂತ ಬಿಸನಳ್ಳಿ, ಬಿಇಒ ಸುರೇಂದ್ರ ಕಾಂಬಳೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ತಾಜುದ್ದಿನ ದಳಪತಿ, ರವೀಂದ್ರ ಬಾಕಳೆ, ನಬಿಸಾಬ ಕುಷ್ಟಗಿ, ಗ್ರೇಡ್-2 ತಹಸೀಲ್ದಾರ ಮುರುಳೀಧರ. ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಮಿರ ಅಲಿ, ಪಿಎಸ್‌ಐ ಹನುಮಂತಪ್ಪ ತಳವಾರ, ಸಿಡಿಪಿಒ ಯಲ್ಲಮ್ಮ ಹಂಡಿ, ಕಾಲೇಜು ಪ್ರಾಚಾರ್ಯ ಡಾ. ಎಸ್.ವಿ. ಡಾಣಿ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಜೀವನಸಾಬ ಬಿನ್ನಾಳ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ 15 ಜನ ಸಾಧಕರಿಗೆ ಹಾಗೂ ವಿಶೇಷ ಸೇವೆಗೈದ ಮಹನೀಯರಿಗೆ ತಾಲೂಕಾಡಳಿತದ ವತಿಯಿಂದ ಗೌರವಿಸಲಾಯಿತು.